ಹುಬ್ಬಳ್ಳಿ: ಪ್ರವಾಸೋದ್ಯಮ ಇಲಾಖೆ ಪ್ರಕಟಿಸಿರುವ ಕಾಫಿ ಟೇಬಲ್ ಪುಸ್ತಕವನ್ನು ನಗರದ ಸರ್ಕ್ಯೂಟ್ ಹೌಸ್ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಅಭಿವೃದ್ಧಿ ಸಂಚಲನ ಸೃಷ್ಟಿಸುವ ಸದುದ್ದೇಶದಿಂದ ಧಾರವಾಡ ಜಿಲ್ಲೆಯ ಕಲೆ, ವಾಸ್ತು ಶಿಲ್ಪ, ಸಾಹಿತ್ಯ ಮತ್ತು ಸರ್ವಾಂಗೀಣ ವೈಶಿಷ್ಟ್ಯತೆಯನ್ನು ಬಿಂಬಿಸುವ ಕಾಫಿ ಟೇಬಲ್ ಪುಸ್ತಕ ಲೋಕಾರ್ಪಣೆಗೊಂಡಿರುವುದು ವಿಶೇಷವಾಗಿದೆ. ಧಾರವಾಡ ಪೇಡಾ, ಗಿರಮಿಟ್-ಮಿರ್ಚಿ ಹಾಗೂ ಇಲ್ಲಿನ ಊಟೋಪಚಾರ, ಪ್ರೇಕ್ಷಣೀಯ ಸ್ಥಳಗಳು ಹಾಗೂ ಎಲ್ಲಾ ರೀತಿಯಿಂದಲೂ ಜಿಲ್ಲೆಯ ಪರಿಚಯ ಮಾಡುವ ಲಿಪಿಯಾಗಿದೆ ಎಂದರು.
ಈ ಜಿಲ್ಲೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಹಾಗೂ ಧಾರವಾಡ ಜಿಲ್ಲೆಗೆ ಆಗಮಿಸುವ ಎಲ್ಲರಿಗೂ ಜಿಲ್ಲೆಯ ವಿಶೇಷತೆ ಪ್ರದರ್ಶಿಸುತ್ತದೆ. 126 ಪುಟಗಳನ್ನು ಹೊಂದಿರುವ ಪುಸ್ತಕ ಇದಾಗಿದ್ದು, ಇದರಲ್ಲಿ ಆಕರ್ಷಕ ಛಾಯಾಚಿತ್ರದ ಮೂಲಕ ವಿಶೇಷತೆ ಪ್ರದರ್ಶಿಸಲಾಗಿದೆ ಎಂದರು.