ಹುಬ್ಬಳ್ಳಿ: ಉತ್ತರ ಕರ್ನಾಟಕದ ಮೊದಲ ಕಾಕ್ಲಿಯರ್ ಇಂಪ್ಲಾಂಟ್ ಎಂಬ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಕಿಮ್ಸ್ ಆಸ್ಪತ್ರೆಯು ಹೊಸ ದಾಖಲೆಯನ್ನು ಬರೆದಿದೆ. ನಗರದ ಕಿರೇಸೂರು ಗ್ರಾಮದ 5 ವರ್ಷದ ಬಾಲಕ ಶ್ರವಣ ದೋಷದ ಜೊತೆಗೆ ಮೂಕನಾಗಿದ್ದ. ಬಡ ಕುಟುಂಬದ ದಂಪತಿಗೆ ತಮ್ಮ ಮಗ ವಿಶೇಷ ಚೇತನ ಎಂದು ತಿಳಿದು ದುಃಖಿತರಾಗಿದ್ದರು. ಆತನನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಬಾಲಕನನ್ನು ತಪಾಸಣೆ ನಡೆಸಿದ ವೈದ್ಯಕೀಯ ತಂಡವು, ಶಸ್ತ್ರಚಿಕಿತ್ಸೆ ಎಸ್‌ಎಸ್‌ಟಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಯೋಜನೆಯಡಿ ಬರುತ್ತದೆ ಎಂಬುದನ್ನು ಮನಗಂಡು ಬೆಂಗಳೂರಿನ ಇಎನ್‌ಟಿ ಶಸ್ತ್ರ ಚಿಕಿತ್ಸಕ ಡಾ.ಶಂಕರ ಮಡಿಕೇರಿ, ಕಿಮ್ಸ್ ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ರವೀಂದ್ರ ಗದಗ, ಅರಿವಳಿಕೆ ವಿಭಾಗದ ಡಾ. ಮಾಧುರಿ, ಡಾ.ಜ್ಯೋತಿ ಸೇರಿ ವೈದ್ಯಕೀಯ ಸಿಬ್ಬಂದಿ ನೇತೃತ್ವದ ತಂಡ ಶಸ್ತ್ರಚಿಕಿತ್ಸೆ ನಡೆಸಿ ವಿಶೇಷ ಸಾಧನವನ್ನು ಬಾಲಕನಿಗೆ ಅಳವಡಿಸಿದೆ.
ಸದ್ಯ ಶಸ್ತ್ರಚಿಕಿತ್ಸೆ ನಂತರ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ. ಈ ಚಿಕಿತ್ಸೆಯೊಂದಿಗೆ ಶ್ರವಣ - ಮೌಖಿಕ ತರಬೇತಿ ನೀಡುವ ಮೂಲಕ ರೋಗಿಗಳು ಸಾಮಾನ್ಯ ಶ್ರವಣ ಮತ್ತು ಭಾಷೆ ಪಡೆಯಲಿದ್ದಾರೆ. ಇನ್ಮುಂದೆ ಈ ಶಸ್ತ್ರಚಿಕಿತ್ಸೆಯು ಇಎನ್‌ಟಿ ವಿಭಾಗದಲ್ಲಿ ನಿರಂತರವಾಗಿ ನಡೆಯಲಿದೆ.
ಖಾಸಗಿ ಆಸ್ಪತ್ರೆಗಳಲ್ಲಿ 8-10 ಲಕ್ಷ ರೂಪಾಯಿ ವೆಚ್ಚ ತಗಲುವ ಈ ಶಸ್ತ್ರಚಿಕಿತ್ಸೆಯನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗಿದೆ. ಈ ಮೂಲಕ ಇಂತಹ ಶಸ್ತ್ರ ಚಿಕಿತ್ಸೆ ಮಾಡಿದ ಮೊದಲ ಸರಕಾರಿ ಆಸ್ಪತ್ರೆ ಎನ್ನುವ ಪ್ರಖ್ಯಾತಿಗೆ ಕಿಮ್ಸ್ ಪಾತ್ರವಾಗಿದೆ. ಈ ಯಶಸ್ವಿ ಚಿಕಿತ್ಸೆಯು ಇಂತಹ ಸಮಸ್ಯೆಯಿಂದ ಬಳಲುತ್ತಿದ್ದ ಮಕ್ಕಳ ಪಾಲಿಗೆ ಆಶಾಭಾವನೆ ಮೂಡಿಸಿದೆ.
ಇದನ್ನೂ ಓದಿ: ಕಿಮ್ಸ್ನಿಂದ ಮತ್ತೊಂದು ಸಾಧನೆ: ಅಪರೂಪದ ಶಸ್ತ್ರ ಚಿಕಿತ್ಸೆ ಮೂಲಕ ಬಡರೋಗಿಯ ಜೀವ ಉಳಿಸಿದ ಸಂಜೀವಿನಿ