ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಚುನಾವಣೆ ಸಮೀಸುತ್ತಿದ್ದಂತೆ ವಿಧಾನಸೌಧ ಬಿಟ್ಟು ಸಂಕಲ್ಪ ಯಾತ್ರೆ ಹೆಸರಿನಲ್ಲಿ ರಾಜ್ಯ ಸಂಚಾರ ಮಾಡುತ್ತಿದ್ದಾರೆ. ಅವರು ಮಾಡಿದ ಸಾಧನೆ ಶೂನ್ಯವಾಗಿದೆ. ಹೀಗಾಗಿ ಅವರು ಮಾಡಿರುವ ಸಾಧನೆಯ ಕುರಿತಾಗಿ ಶ್ವೇತಪತ್ರ ಹೊರಡಿಸಲಿ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ವಿ ಎಸ್ ಉಗ್ರಪ್ಪ ಒತ್ತಾಯಿಸಿದರು.
ಬಿಜೆಪಿ ಹೈಕಮಾಂಡ್ನಿಂದ 150 ಟಾರ್ಗೆಟ್: ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇವತ್ತು ಚುನಾವಣೆ ಯುದ್ದದ ಕಾರ್ಮೋಡಗಳಿವೆ. ಈ ವೇಳೆ ಆಡಳಿತ ಸೂತ್ರ ಹಿಡಿದಿರುವ ರಾಜ್ಯದ ಮುಖ್ಯಮಂತ್ರಿಗಳು, ಆ ಪಕ್ಷದ ಮುಖಂಡರುಗಳು ವಿಧಾನಸೌಧ ಬಿಟ್ಟು ಜನಸಂಕಲ್ಪ ಯಾತ್ರೆ ಮೂಲಕ ರಾಜ್ಯ ತಿರುಗುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ 150 ಟಾರ್ಗೆಟ್ ಕೊಟ್ಟಿದೆ ಎಂದು ಹುಮ್ಮಸ್ಸಿನಿಂದ ಸಿಎಂ ಬಸವರಾಜ ಬೊಮ್ಮಾಯಿ ಪ್ರಯತ್ನ ಮಾಡುತ್ತಿದ್ದಾರೆ. ಬೊಮ್ಮಾಯಿ ಮಾಡಿದ ಸಾಧನೆ ಎಂದರೇ ಅದು, ಎಲ್ಲ ಇಲಾಖೆಯಲ್ಲಿ 40% ಭ್ರಷ್ಟಾಚಾರ. 540 ಸಬ್ಇನ್ಸ್ಪೆಕ್ಟರ್ ನೇಮಕಾತಿ ಅವ್ಯವಹಾರ ಮಾಡಿ ಎಜಿಡಿಪಿ ಸೇರಿದಂತೆ 50ಕ್ಕೂ ಹೆಚ್ಚು ಜನರನ್ನು ಬಂಧನ ಮಾಡಿಸಿದ್ದಾರೆ. ಚುನಾವಣೆ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಬಿಜೆಪಿ ವಿರೋಧಿಯಾಗಿರುವ ಮತದಾರರ ಹೆಸರನ್ನು ಡಿಲಿಟ್ ಮಾಡಿಸಿದೆ ಎಂದು ಆರೋಪಿಸಿದರು.
ಬಿಜೆಪಿ ವಿರುದ್ಧ ಹರಿಹಾಯ್ದ ಉಗ್ರಪ್ಪ: ರಾಜ್ಯ ಮತ್ತು ಕೇಂದ್ರದಲ್ಲಿ ಡಬಲ್ ಎಂಜಿನ್ ಸರ್ಕಾರ ಇದೆ. ಆದ್ರೆ ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿದೆ. ಅಧಿಕಾರಕ್ಕೆ ಬರುವ ಮುಂಚೆ 1 ಕೋಟಿಗೂ ಅಧಿಕ ಉದ್ಯೋಗ ಸೃಷ್ಟಿ ಜೊತೆಗೆ ಬೆಲೆ ಕಡಿಮೆ ಮಾಡುವ ಭರವಸೆ ಕೊಟ್ಟಿದ್ದೀರಿ. ಆದರೆ ಇದೀಗ ನೀವು ಮಾಡಿದ್ದು ಏನೂ?. ಇದೀಗ ಮಾರುಕಟ್ಟೆಯಲ್ಲಿ ಬೆಲೆಗಳು ಗಗನಕ್ಕೆ ಏರಿವೆ. ಈ ಸರ್ಕಾರದಲ್ಲಿ ಹೊಸದಾಗಿ ನೀರಾವರಿ ಯೋಜನೆ ಮಾಡಿಲ್ಲ. ಸರ್ಕಾರ ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲವಾಗಿವೆ. ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಜನರನ್ನು ದಾರಿ ತಪ್ಪಿಸುತ್ತಿವೆ. ದೇಶದಲ್ಲಿ ಬಡತನ ಕಡಿಮೆ ಆಗಿಲ್ಲ. ಈ ಹಿಂದೆ ಹಸಿದವರ ಸಂಖ್ಯೆ 65 ಇದ್ದದ್ದು, ಇದೀಗ 107ನೇ ಸ್ಥಾನಕ್ಕೆ ಏರಿದೆ. ಇದೇ ಈ ಸರ್ಕಾರದ ಸಾಧನೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಪ್ರಕರಣ ದಾಖಲಾದ ಬಗ್ಗೆ ಮಾತನಾಡಲಿ: ಕಾಮನ್ ಸಿವಿಲ್ ಕೋಡ್ ತರುವ ನಿಟ್ಟಿನಲ್ಲಿ ಮುಂದಾಗುತ್ತಿದ್ದೀರಿ. ಅವರಿಗೆ ಗೊತ್ತಿರಬಹುದು ಹಿಂದೂ ಲಾ ಮಾಡಿರುವುದು ಕೇಂದ್ರ ಸರ್ಕಾರ ನೀವು ಪದೇ ಪದೇ ಒನ್ ನೇಷನ್, ಒನ್ ಟ್ಯಾಕ್ಸ್ ಹೇಳುತ್ತೀರಿ. 370 ಕಲಂ ಪ್ರಕಾರ ಮಾಡೋದು ಇದ್ರೆ ಮಾಡಿ, ತಪ್ಪು ದಾರಿಗೆ ಎಳೆಯುವ ದೃಷ್ಟಿಯಿಂದ ರಾಷ್ಟ್ರಕ್ಕೆ ಮಾರಕವಾದ ಭ್ರಷ್ಟಾಚಾರ ನಿಲ್ಲಿಸೋಕೆ ಏನೂ ಪ್ರಯತ್ನ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಾನು ತಿನ್ನೋದಿಲ್ಲ, ತಿನ್ನೋರಿಗೆ ಬಿಡೋದಿಲ್ಲ ಎಂದು ಹೇಳುತ್ತಾರೆ. ಆದರೆ ಆರೋಗ್ಯ ಸಚಿವ ಡಾ. ಸುಧಾಕರ್, ಆನಂದ ಸಿಂಗ್ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಇನ್ನೊಬ್ಬ ಸಾರಿಗೆ ಸಚಿವ ಶ್ರೀರಾಮುಲು ಮೇಲೆ ಚಾರ್ಜ್ ಸೀಟ್ ಸಲ್ಲಿಕೆ ಆಗಿದೆ. ಈ ಬಗ್ಗೆ ಬಿಜೆಪಿ ಮುಖಂಡರು ಮಾತನಾಡಲಿ ಎಂದು ವಿ ಎಸ್ ಉಗ್ರಪ್ಪ ಕುಟುಕಿದರು.
ರಾಜ್ಯ ಬಿಜೆಪಿ ಸರ್ಕಾರ ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸಿದ್ದನ್ನೇ ಯುದ್ದ ಗೆದ್ದವರ ಹಾಗೆ ಬಳ್ಳಾರಿಯಲ್ಲಿ ಸಮಾವೇಶ ಮಾಡಿದ್ದಾರೆ. ಬಿಜೆಪಿಗೆ ಸಾಮಾಜಿಕ ನ್ಯಾಯಕ್ಕೆ ಏನೂ ಸಂಬಂಧ?. ಇದೇ ಬಿಜೆಪಿ ಮುಖಂಡರು ಈ ಹಿಂದೆ ಸಂವಿಧಾನ ಕಿತ್ತು ಎಸೆಯುವಂತೆ ಮಾತನಾಡಿದ್ದರು. ಮೀಸಲಾತಿ ಕಿತ್ತು ಹಾಕಬೇಕೆಂದು ಆರ್ಎಸ್ಎಸ್ನ ಪ್ರಮುಖರು ಹೇಳಿದ್ದರು. ಆದರೆ ಕಾಂಗ್ರೆಸ್ ಹಿಂದೂ ವಿರೋಧ ಅಲ್ಲ. ಎಲ್ಲರನ್ನೂ ಸಮಾನವಾಗಿ ನೋಡುವ ಪಕ್ಷ ಎಂದರು.
ಇದನ್ನೂ ಓದಿ: ನಾಥೂರಾಂ ಗೋಡ್ಸೆಯನ್ನು 'ಗೋಡ್ಸೆ ಜಿ' ಎಂದ ರಾಹುಲ್ ಗಾಂಧಿ!
ಇನ್ನು, ಸಚಿವ ಬಿ ಶ್ರೀರಾಮುಲು ಬಾಯಿಗೆ ಬಂದಂತೆ ಕಾಂಗ್ರೆಸ್ ಹೈಕಮಾಂಡ್, ರಾಜ್ಯದ ಮುಖಂಡರ ಬಗ್ಗೆ ಮಾತನಾಡಿ, ತಾವು ಬಹುದೊಡ್ಡ ಸಾಧನೆ ಮಾಡಿದ ಹಾಗೆ ಬಿಂಬಿಸಿಕೊಳ್ಳುತ್ತಾರೆ. ಶ್ರೀರಾಮುಲು ಅವರು ಸೋತವರು. ಈ ಹಿಂದೆ ಬಳ್ಳಾರಿ ಬಿಟ್ಟು, ಬಾದಾಮಿ, ಮೊಳಕಾಲ್ಮೂರಿಗೆ ಹೋಗಿದ್ದಾರೆ. ಹೀಗಿರುವಾಗ ಇನ್ನೊಬ್ಬರ ಸೋಲಿನ ಬಗ್ಗೆ ಮಾತನಾಡುವುದು ತಪ್ಪು ಎಂದು ಏಕವಚನದಲ್ಲಿಯೇ ಉಗ್ರಪ್ಪ ಹರಿಹಾಯ್ದರು.