ಹುಬ್ಬಳ್ಳಿ: "ಸಿದ್ದರಾಮಯ್ಯ ತಾವೇ ಸುಳ್ಳಿನ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಅವರು ಹೇಳಿರುವ ಸುಳ್ಳು ಒಂದೊಂದಾಗಿ ಹೊರಬರುತ್ತಿದೆ. ಸಿದ್ದರಾಮಯ್ಯ ಅವರು ಪ್ರಣಾಳಿಕೆಯಲ್ಲಿ ಘೋಷಿಸಿರುವ ಭರವಸೆಗಳ ಕುರಿತು ವಿಧಾನಸಭೆ ಅಧಿವೇಶನದಲ್ಲಿಯೇ ಹೇಳಿದ್ದೇನೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಆದರ್ಶನಗರದ ಸಿಎಂ ನಿವಾಸದ ಬಳಿ ಮಾತನಾಡಿದ ಅವರು, "ಇನ್ನೊಬ್ಬರ ಬಗ್ಗೆ ಸಾವಿರ ಬಾರಿ ಸುಳ್ಳು ಹೇಳಿದರೆ ಅದು ಸತ್ಯವಾಗುತ್ತದೆ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಸತ್ಯ ಸತ್ಯವೇ, ಸುಳ್ಳು ಸುಳ್ಳೇ. ಅವರು ಹೇಳಿದ ತಕ್ಷಣ ಸುಳ್ಳು ಸತ್ಯವಾಗಲ್ಲ, ಸತ್ಯ ಸುಳ್ಳಾಗಲ್ಲ. ಆದರೆ ಅತಿಯಾದ ಸುಳ್ಳು ಹೇಳಿದ ಮೇಲೆ ಸುಳ್ಳೇ ಸತ್ಯ ಎಂದು ಅವರಿಗೆ ನಂಬಿಕೆ ಬರಲಾರಂಭಿಸಿದೆ" ಎಂದು ಕಿಡಿಕಾರಿದರು.
ಇದನ್ನೂ ಓದಿ: ನಾನೇ ಸ್ವಯಂ ಪ್ರೇರಿತವಾಗಿ ನಿವೃತ್ತಿಯಾಗಿದ್ದೇನೆ, ವೀರಶೈವ ಲಿಂಗಾಯತರು ಅಪಾರ್ಥ ಮಾಡಿಕೊಳ್ಳಬೇಡಿ: ಬಿಎಸ್ವೈ
ಮಠಾಧೀಶರನ್ನು ಚುನಾವಣಾ ಅಖಾಡಕ್ಕೆ ಇಳಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, "ಇದುವರೆಗೂ ಯಾವುದೇ ಮಠಾಧೀಶರು ನನ್ನನ್ನು ಸಂಪರ್ಕಿಸಿಲ್ಲ, ಚರ್ಚಿಸಿಲ್ಲ. ಮಠಾಧೀಶರು ಚುನಾವಣೆಗೆ ಇಳಿಯುತ್ತಾರೆ ಎನ್ನುವ ಬಗ್ಗೆ ಏನೂ ಹೇಳಲು ಆಗುವುದಿಲ್ಲ" ಎಂದರು. ಬಳಿಕ ಸಿದ್ದರಾಮಯ್ಯ ಅರ್ಕಾವತಿ ಹಗರಣ ಸಿಬಿಐ ತನಿಖೆಗೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಸಿಬಿಐ ತನಿಖೆ ಬಗ್ಗೆ ಯಾರು ಹೇಳಿದ್ದು? ಎಂದು ಪ್ರಶ್ನಿಸಿ, "ಅರ್ಕಾವತಿ ಹಗರಣದ ಬಗ್ಗೆ ಕಮೀಷನ್ ವರದಿ ಕೊಟ್ಟಿದೆ. ಮುಂದೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುತ್ತದೆ. ನಾವು ಸಂಪುಟದಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ" ಎಂದು ತಿಳಿಸಿದರು.
ಸೋನಿಯಾ ಗಾಂಧಿ ರಾಜಕೀಯ ನಿವೃತ್ತಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, "ಅದು ಅವರ ವೈಯಕ್ತಿಕ ವಿಚಾರ. ಈ ಬಗ್ಗೆ ನಾನು ಮಾತನಾಡುವುದಿಲ್ಲ" ಎಂದರು. ನಂತರ 7 ವೇತನ ಆಯೋಗ ಜಾರಿಗಾಗಿ ರಾಜ್ಯ ಸರ್ಕಾರಿ ನೌಕರರ ಮುಷ್ಕರ ವಿಚಾರದ ಬಗ್ಗೆ ಮಾತನಾಡಿದ ಅವರು, "ನಾನು ಈಗಾಗಲೇ ಅವರ ಜೊತೆ ಚರ್ಚಿಸಿದ್ದೇನೆ. ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ" ಎಂದು ಹೇಳಿದರು. ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ವಿಚಾರವಾಗಿ ಮಾತನಾಡಿ, "ಯಡಿಯೂರಪ್ಪ ಅವರು ಸಕ್ರಿಯ ರಾಜಕಾರಣದಿಂದ ದೂರವಾಗಲ್ಲ. ಈ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿಯನ್ನು ಅವರು ಮತ್ತಷ್ಟು ಬಲಪಡಿಸುತ್ತಾರೆ" ಎಂದರು.
ಇದನ್ನೂ ಓದಿ: ಯುವ ಸಮಾವೇಶದಲ್ಲಿ 'ಕೈ' ಪಕ್ಷದ ವಿರುದ್ಧ ಬಿ.ವೈ.ವಿಜಯೇಂದ್ರ, ಸಚಿವ ಅಶ್ವಥ್ ನಾರಾಯಣ್ ಗುಡುಗು