ಹುಬ್ಬಳ್ಳಿ: ರಾಹುಲ್ ಗಾಂಧಿ ರಾಜ್ಯ ಭೇಟಿ ವಿಚಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, "ರಾಹುಲ್ ಗಾಂಧಿಯವರ ಕಳೆದ ಬಾರಿಯ ಭೇಟಿಗೂ ಈ ಭೇಟಿಗೂ ವ್ಯತ್ಯಾಸವಿದೆ. ಅವರು ಬ್ರಿಟನ್ ವಿವಿಯಲ್ಲಿ ದೇಶ, ಪ್ರಜಾಪ್ರಭುತ್ವ ವಿರೋಧಿ ಮಾತುಗಳನ್ನಾಡಿದ್ದಾರೆ. ದೇಶ ವ್ಯಾಪ್ತಿ ಇದರ ಬಗ್ಗೆ ಖಂಡನೆಯಾಗಿದೆ. ಅವರ ಮಾತಿಗೆ ಕರ್ನಾಟಕದ ಜನ ಯಾವುದೇ ಬೆಲೆ ಕೊಡಲ್ಲ" ಎಂದರು.
ಸಿದ್ಧರಾಮಯ್ಯ ಬೋಗಸ್ ಕಾರ್ಡ್ ಬಗ್ಗೆ ಮಾತನಾಡುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಕೊಟ್ಟಿದ್ದ ಭರವಸೆಯನ್ನೇ ಕಾಂಗ್ರೆಸ್ ಈಡೇರಿಸಿಲ್ಲ. ಕಾಂಗ್ರೆಸ್ ಜನರನ್ನು ಯಾಮಾರಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ನವರದ್ದು ಗ್ಯಾರಂಟಿ ಕಾರ್ಡ್ ಅಲ್ಲ, ವಿಸಿಟಿಂಗ್ ಕಾರ್ಡ್ ಎಂದರು. ಸಿದ್ಧರಾಮಯ್ಯ ವಿರುದ್ಧ ಸಾಕಷ್ಟು ಚಾರ್ಜ್ಗಳಿವೆ. ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಅಂಥವರು ಭ್ರಷ್ಟಾಚಾರದ ಬಗ್ಗೆ ಮಾತನಾಡ್ತಾರೆ ಅಂದ್ರೆ 'ಇದ್ದಿಲು ಮಸಿಗೆ ಬುದ್ಧಿ ಹೇಳಿದಂತೆ'. ಭಾರತದಲ್ಲಿ ಕಾಂಗ್ರೆಸ್ ಪತನ ಶುರುವಾಗಿದೆ ಎಂದು ಸಿಎಂ ಬೊಮ್ಮಾಯಿ ವ್ಯಂಗ್ಯವಾಡಿದರು.
ಚಿಂಚನಸೂರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿ, ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ನಿಂದ ಬಂದಿದ್ದರು. ಮರಳಿ ಅಲ್ಲಿಗೇ ಹೋಗುತ್ತಿದ್ದಾರೆ ಎಂದರು. ಇನ್ನು ಗುರುಮಠಕಲ್ ಕ್ಷೇತ್ರದಲ್ಲಿ ಈಗಾಗಲೇ ನಮ್ಮ ಪಕ್ಷದ ಸಂಘಟನೆ ಚೆನ್ನಾಗಿದೆ. ಗುರುಮಠಕಲ್ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ. ಮಾ.24 ಕ್ಕೆ ರಾಜ್ಯಕ್ಕೆ ಅಮಿತ್ ಶಾ, ಮಾ. 25 ಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಮಾ.26ರಂದು ಮತ್ತೆ ಅಮಿತ್ ಶಾ ಪ್ರವಾಸ ಮಾಡಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ಮಾಹಿತಿ ನೀಡಿದರು.
ಇದನ್ನೂ ಓದಿ:ಪರಿಷತ್ ಸದಸ್ಯ ಸ್ಥಾನಕ್ಕೆ ಬಾಬುರಾವ್ ಚಿಂಚನಸೂರ್ ರಾಜೀನಾಮೆ
ರೀಡೂ ವಾಚ್ ಬಗ್ಗೆ ನ್ಯಾಯಾಂಗ ತನಿಖೆ ಮಾಡ್ತಿದ್ದೇವೆ. ವಿಪಕ್ಷಗಳ 59 ಪ್ರಕರಣಗಳ ಪೈಕಿ ಕೆಲವನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದೇವೆ. ಕೆಲವು ಪ್ರಕರಣಗಳನ್ನು ಮುಂದಿನ ದಿನಗಳಲ್ಲಿ ಕೊಡುತ್ತೇವೆ ಎಂದರು.
ಬಿಜೆಪಿ ಜನರ ಭಾವನಾತ್ಮಕ ವಿಚಾರಗಳ ಜೊತೆ ಆಟವಾಡ್ತಿದೆ ಎಂಬ ಆರೋಪ ವಿಚಾರವಾಗಿ ಮಾತನಾಡಿದ ಅವರು "ಇತಿಹಾಸವನ್ನು ಮರೆಮಾಚುವ ಕೆಲಸ ನಡೆದಿದೆ. ಹಲವಾರು ಪ್ರಕರಣಗಳಲ್ಲಿ ಸತ್ಯ ಮರೆಮಾಚುವ ಕೆಲಸ ನಡೆದಿದೆ. ಅವುಗಳ ಸತ್ಯ ಹೇಳಿದರೆ ಇವರಿಗೆ ತಡೆದುಕೊಳ್ಳಲು ಆಗಲ್ಲ. ಸತ್ಯ ಶೋಧನೆ ಆದಾಗ ಎಲ್ಲವೂ ಹೊರಗೆ ಬರುತ್ತದೆ, ಜಯ ಸಿಗುತ್ತದೆ" ಎಂದರು.
ಇದನ್ನೂ ಓದಿ: ಟಿಕೆಟ್ ಕೊಡಲು ಸಿದ್ದವಿದ್ರೂ ಚಿಂಚನಸೂರ್ ಪಕ್ಷ ಬಿಟ್ರು: ಬಿ.ಎಸ್.ಯಡಿಯೂರಪ್ಪ
ಸಾರಿಗೆ ನೌಕರರ ಮುಷ್ಕರ ವಿಚಾರಕ್ಕೆ ಪ್ರತಿಕ್ರಿಯಿಸಿ ,ಅವರ ಬೇಡಿಕೆ ಈಡೇರಿಸಿದ್ದೇವೆ. ಪ್ರಮುಖ ಸಂಘಟನೆ ಮುಖಂಡರೊಂದಿಗೆ ಚರ್ಚಿಸಿ, ಬಗೆಹರಿಸಿದ್ದೇನೆ. ಅಭಿನಂದನೆ ಸಲ್ಲಿಸುವ ಜತೆಗೆ, ಮುಷ್ಕರ ವಾಪಸ್ ಪಡೆದಿದ್ದಾರೆ. ಮತ್ತೆ ಮುಷ್ಕರಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಕೋಲಾರದಿಂದಲೇ ಸ್ಪರ್ಧಿಸುವಂತೆ ಒತ್ತಡ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಇಂದು ನಗರದ ಶಿವಾನಂದ ವೃತ್ತದ ಸಮೀಪವಿರುವ ಸಿದ್ದರಾಮಯ್ಯನವರ ಸರ್ಕಾರಿ ನಿವಾಸಕ್ಕೆ ಆಗಮಿಸಿದ ನೂರಾರು ಅಭಿಮಾನಿಗಳು, ಹೊರಭಾಗದ ಗೇಟ್ ಮುಂದೆ ಕುಳಿತು ಧರಣಿ ನಡೆಸಿದರು."ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿಯಬಾರದು. ಇದು ಜಿಲ್ಲೆಯ ಅಭಿಮಾನಿಗಳ ಕೋರಿಕೆ. ಕೋಲಾರವನ್ನೇ ತಮ್ಮ ಆಯ್ಕೆಯಾಗಿ ಉಳಿಸಿಕೊಳ್ಳಬೇಕು" ಎಂದು ಆಗ್ರಹಿಸಿದರು.
ಇದನ್ನೂ ಓದಿ: ಕೋಲಾರದಿಂದಲೇ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಅಭಿಮಾನಿಗಳ ಒತ್ತಡ: ನಿವಾಸಕ್ಕೆ ಮುತ್ತಿಗೆ ಯತ್ನ