ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಿಸುತ್ತಿರೋದು ನಾವಲ್ಲ. ನೂರಾರು ಜನ ನೂರಾರು ಆರೋಪ ಮಾಡ್ತಾರೆ. ಅವರ ಆರೋಪಗಳಲ್ಲಿ ಹುರುಳಿಲ್ಲ. ಎಲ್ಲವೂ ಸುಳ್ಳು ವದಂತಿ ಎಂದು ಮುಖ್ಯಂಮತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈವರೆಗೂ ನಾವು ಪಕ್ಷದ ವರಿಷ್ಠರ ಜತೆ ಸಂಪರ್ಕದಲ್ಲಿದ್ದೇವೆ. ನಾವು ಹಾಗೂ ಶೆಟ್ಟರ್ ಬಹಳ ಆತ್ಮೀಯರು. ಯಾವುದೇ ಕಾರಣಕ್ಕೂ ಅಂತಹ ಕೆಲಸ ಮಾಡಲ್ಲ. ಅವರಿಗೆ ಶೆಟ್ಟರ್ ಟಿಕೆಟ್ ಕೊಡಿಸಲು ಬಹಳ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ನಿನ್ನೆ ಧರ್ಮೇಂದ್ರ ಪ್ರಧಾನ ಬಳಿ ಚರ್ಚೆ ಮಾಡಿದ್ದೇನೆ. ಶೆಟ್ಟರ್ ಅವರದ್ದು ಜನಸಂಘ ಕಾಲದ ಮನೆತನ. ಬಿಜೆಪಿಗೆ ಶೆಟ್ಟರ್ ಅತ್ಯಂತ ನಿಷ್ಠರು ಮತ್ತು ಉತ್ತರ ಕರ್ನಾಟಕ ಭಾಗಕ್ಕೆ ಅತ್ಯಂತ ಅವಶ್ಯಕವಾಗಿದ್ದಾರೆ. ಅವರನ್ನು ಉಳಿಸಿಕೊಳ್ಳಬೇಕೆಂದು ಹೇಳಿದ್ದೇನೆ. ನಡ್ಡಾ ಅವರೊಂದಿಗೆ ಮಾತನಾಡಿದ್ದೇನೆ. ಅವರನ್ನು ಉಳಿಸಿಕೊಳ್ಳುವ ವಿಶ್ವಾಸ ಇದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
ಓಲೇಕಾರ ಆರೋಪಕ್ಕೆ ತಿರುಗೇಟು: ನೀರಾವರಿ ಯೋಜನೆಯಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರದ ಬಗ್ಗೆ ನೆಹರೂ ಓಲೇಕಾರ ಮಾಡಿರುವ ಆರೋಪಕ್ಕೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದರು. ಭ್ರಷ್ಟಾಚಾರ ಆರೋಪಕ್ಕೆ ದಾಖಲೆಗಳನ್ನ ನೀಡಲಿ. ಅದೇ ಹಗರಣದಲ್ಲಿ ನೆಹರೂ ಓಲೇಕಾರಗೆ ಶಿಕ್ಷೆಯೂ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
63 ಪ್ರತಿಶತ ಕ್ಷೇತ್ರಗಳಲ್ಲಿ ಬಿಜೆಪಿಯಲ್ಲಿ ಗೊಂದಲವಿದೆ. ಇದು ಕಾಂಗ್ರೆಸ್ಗೆ ಪ್ಲಸ್ ಪಾಯಿಂಟ್ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಾಗಾದ್ರೆ ಕಾಂಗ್ರೆಸ್ನವರಿಗೆ ಸ್ವಂತ ಶಕ್ತಿ ಇಲ್ಲ ಅಂತಾ ಆಯ್ತು ಎಂದು ಕಿಡಿಕಾರಿದರು. ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ, ಶೀಘ್ರವೇ ಎಲ್ಲವೂ ತಿಳಿಯಾಗುತ್ತದೆ. ಇನ್ನೆರಡು ಮೂರು ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ. ಚುನಾವಣೆ ಎಂದರೆ ಸವಾಲು. ನನ್ನ ಮೊದಲ ಚುನಾವಣೆಯಲ್ಲಿಯೂ ಸೋಲು ಎಂದು ಬರೆದಿದ್ದರು. ಆದರೆ ಅವೆಲ್ಲವೂ ಸುಳ್ಳಾಗಿದೆ. ನಾನು ಗೆದ್ದು ಬಂದಿದ್ದೇನೆ. ಇಂದು ಶಿಗ್ಗಾಂವಿಗೆ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಶೆಟ್ಟರ್ ಸಭೆ ಬಗ್ಗೆ ಗೊತ್ತಿದೆ..2 ದಿನದಲ್ಲಿ ಮೂರನೇ ಪಟ್ಟಿ ಬಿಡುಗಡೆ: ಸಿಎಂ ಬೊಮ್ಮಾಯಿ
16 ಪಾಲಿಕೆ ಸದಸ್ಯರ ರಾಜೀನಾಮೆ: ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಹಾಲಿ ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ನೀಡುವಲ್ಲಿ ವಿಳಂಬ ಮಾಡುತ್ತಿದ್ದು, ಬಿಜೆಪಿಯ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 16 ಸದಸ್ಯರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಪತ್ರ ಬರೆದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಲ್ಲಿಸಿದ್ದಾರೆ. ಪಾಲಿಕೆ ಬಿಜೆಪಿ ಸದಸ್ಯರಾದ ಮಲ್ಲಿಕಾರ್ಜುನ ಗುಂಡೂರ, ರಾಜಣ್ಣ ಕೊರವಿ, ಉಮೇಶಗೌಡ ಕೌಜಗೇರಿ, ತಿಪ್ಪಣ್ಣ ಮಜ್ಜಿಗಿ, ಸೀಮಾ ಮುಗಲಿಶೆಟ್ಟರ್, ಸಂತೋಷ ಚೌಹಾಣ್, ಮಹದೇವಪ್ಪ ನರಗುಂದ, ಬೀರಪ್ಪ ಖಂಡೇಕರ, ಉಮಾ ಮುಕುಂದ, ವೀರಣ್ಣ ಸವಡಿ, ರೂಪಾ ಶೆಟ್ಟಿ, ಕಿಶನ್ ಬೆಳಗಾವಿ, ವೀಣಾ ಬರದ್ವಾಡ, ಸರಸ್ವತಿ ಧೋಂಗಡಿ, ಚಂದ್ರಿಕಾ ವೆಂಕಟೇಶ ಮೇಸ್ತ್ರಿ, ಮೀನಾಕ್ಷಿ ವಂಟಮೂರಿ ರಾಜೀನಾಮೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಜಗದೀಶ್ ಶೆಟ್ಟರ್‌ಗೆ ಟಿಕೆಟ್ ನೀಡದ ಅಸಮಾಧಾನ; 16 ಪಾಲಿಕೆ ಸದಸ್ಯರ ರಾಜೀನಾಮೆ