ಹುಬ್ಬಳ್ಳಿ: ಬಿಸಿಲಿನ ಬೇಗೆಯಿಂದ ಬಳಲಿದ ಜನರಿಗೆ ದೇಹ ತಂಪಾಗಿಸಲು ಮಾರುಕಟ್ಟೆಗೆ ಆಗಮಿಸಿರುವ ಬಡವರ ಫ್ರಿಡ್ಜ್ ಎಂದೇ ಖ್ಯಾತಿ ಹೊಂದಿರುವ ಮಣ್ಣಿನ ಮಡಿಕೆಗಳಿಗೆ ಭಾರೀ ಬೇಡಿಕೆ ಬಂದಿದೆ.
ಹೌದು, ಕಳೆದ ವರ್ಷದಲ್ಲಿ ಕೊರೊನಾ ಮಹಾಮಾರಿಯಿಂದ ವ್ಯಾಪಾರವಿಲ್ಲದೇ ತತ್ತರಿಸಿ ಹೋಗಿದ್ದ ಕುಂಬಾರರಿಗೆ ಈ ವರ್ಷ ತುಸು ನೆಮ್ಮದಿ ಮೂಡಿಸಿದೆ. ಈ ಬಾರಿ ಮಡಿಕೆ ಮಾರಾಟದಲ್ಲಿ ಏರಿಕೆಯಾಗಿರುವುದರಿಂದ ಕುಂಬಾರರು ಲಾಭ ಕಾಣುವಂತಾಗಿದೆ. ಎಲ್ಲರ ಮನೆಯಲ್ಲಿ ಫ್ರಿಡ್ಜ್ಗಳಿರುವ ಈ ಕಾಲದಲ್ಲಿಯೂ ಜನರು ಮಡಿಕೆಗಳನ್ನು ಖರೀದಿಸುತ್ತಿದ್ದಾರೆ.
ಬಡವರ ಫ್ರಿಡ್ಜ್ ಎಂಬ ಖ್ಯಾತಿಗೆ ಪಾತ್ರವಾದರೂ ಇವುಗಳನ್ನು ಕೇವಲ ಬಡವರು ಮಾತ್ರ ಖರೀದಿಸುವುದಿಲ್ಲ, ಶೇಕಡಾ 60 ರಷ್ಟು ಫ್ರಿಡ್ಜ್ ಇರುವವರೇ ಖರೀದಿಸುತ್ತಾರೆ ಆದ್ದರಿಂದ ಸದ್ಯ ಮಡಿಕೆಗೆ ಬೇಡಿಕೆ ಹೆಚ್ಚಾಗಿರುವುದರಿಂದ ಮಾರಾಟಗಾರರ ಮುಖದಲ್ಲಿ ಮಂದಹಾಸ ಮೂಡಿದೆ.
ಇನ್ನೂ ಎಲೆಕ್ಟ್ರಾನಿಕ್ ಫ್ರಿಡ್ಜ್ ನೀರು ಕುಡಿಯುವುದರಿಂದ ಶೀತ ಬರುತ್ತದೆ. ಆದರೆ ಮಡಿಕೆ ನೀರು ದೇಹಕ್ಕೆ ತಂಪು ನೀಡುವುದರ ಜೊತೆಯಲ್ಲಿ ಆರೋಗ್ಯಕ್ಕೂ ಉತ್ತಮ, ಅಂದಹಾಗೆ ಮಾರಾಟಗಾರರ ಬಳಿ ನೀರಿನ ಸಂಗ್ರಹ ಸಾಮರ್ಥ್ಯ ಆಧರಿಸಿ, 50 ರೂ.ದಿಂದ 350 ರೂ. ವರೆಗಿನ ಮಡಿಕೆಗಳು ಮಾರಾಟಕ್ಕೆ ಇದ್ದು, ಪ್ರತಿನಿತ್ಯ ಎಲ್ಲಾ ಮಡಿಕೆ ಸೇರಿ ಕನಿಷ್ಠ 75ರಿಂದ 100 ಮಡಿಕೆಗಳು ಮಾರಾಟ ಆಗುತ್ತಿದೆ. ದೇಸಿ ಫ್ರಿಜ್ ಬಳಕೆ ಆರೋಗ್ಯಕ್ಕೆ ಪೂರಕ, ಇದರಿಂದಾಗಿ ಮಡಿಕೆ ಕೊಳ್ಳುತ್ತಿರುವುದಾಗಿ ಗ್ರಾಹಕರು ಹೇಳಿದ್ದಾರೆ.
ಒಟ್ಟಾರೆ ಎಲೆಕ್ಟ್ರಾನಿಕ್ ಫ್ರಿಡ್ಜ್ ತಾತ್ಕಾಲಿಕವಾಗಿ ದೇಹ ತಂಪು ಮಾಡಿದರೆ ಬಡವರ ಫ್ರಿಡ್ಜ್ ಮಾತ್ರ ಬೇಸಿಗೆ ಕಾಲ ಮುಗಿಯುವವರೆಗೂ ದೇಹ ತಂಪು ಇಡುವುದರ ಜೊತೆಗೆ ಆರೋಗ್ಯ ಕಾಪಾಡುವ ಕೆಲಸ ಮಾಡುವುದರಿಂದ ಜನ ಮಣ್ಣಿನ ಮಡಿಕೆ ಕಡೆ ಮುಖ ಮಾಡಿದ್ದಾರೆ.