ಧಾರವಾಡ: ಆರೋಗ್ಯ ವಿಮೆ ಪಾವತಿಸದ ಚೋಳಮಂಡಲಂ ವಿಮಾ ಕಂಪನಿಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು ₹ 1 ಲಕ್ಷದ 68 ಸಾವಿರ ದಂಡ ಮತ್ತು ಪರಿಹಾರ ನೀಡುವಂತೆ ಆದೇಶಿಸಿದೆ.
ಧಾರವಾಡ ರಾಣಿ ಚೆನ್ನಮ್ಮ ನಗರದ ನಿವಾಸಿ ಸಿ.ಎಂ. ರಮೇಶ್ ಮತ್ತು ಅವರ ಪತ್ನಿ ಸುಶೀಲಾ ಅಕ್ಟೋಬರ್ 29, 2020 ರಂದು ₹ 17,895 ರೂ.ಗಳನ್ನು ಚೋಳಮಂಡಲಂ ವಿಮಾ ಕಂಪನಿಗೆ ಕಟ್ಟಿ ಪ್ಯಾಮಿಲಿ ಪ್ಲೋಟರ್ ಆರೋಗ್ಯ ವಿಮೆ ಪಡೆದಿದ್ದರು. ಪ್ರತಿ ವರ್ಷ ಅವರು ವಿಮೆ ನವೀಕರಿಸುತ್ತಿದ್ದರು. ಕಳೆದ ಏಪ್ರಿಲ್ನಲ್ಲಿ ದಂಪತಿಗಳು ಕಣ್ಣಿನ ತೊಂದರೆ ಎಂದು ಕೇರಳದ ಎರ್ನಾಕುಲಮ್ ಆಯುರ್ವೆದಿಕ್ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆದಿದ್ದರು.
ಅವರ ಚಿಕಿತ್ಸೆಗಾಗಿ ಖರ್ಚಾಗಿದ್ದ ₹ 1,08,565 ಆಸ್ಪತ್ರೆಯ ಬಿಲ್ ಸಂದಾಯಕ್ಕಾಗಿ ವಿಮಾ ಕಂಪನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ವಿಮಾ ಕಂಪನಿಯವರು ಹಣವನ್ನು ಪಾವತಿಸದೆ ತಮ್ಮ ಕ್ಲೈಮ್ ಅರ್ಜಿಯಲ್ಲಿ ಕಣ್ಣಿನ ತೊಂದರೆಯ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಅರ್ಜಿಯನ್ನು ತಿರಸ್ಕರಿಸಿತ್ತು. ತಾವು ಪಡೆದುಕೊಂಡ ವಿಮೆ ಜಾರಿಯಲ್ಲಿದ್ದರೂ ಆ ರೀತಿ ಇಲ್ಲದ ಕಾರಣ ಹೇಳಿ ಕ್ಲೈಮ್ ಅರ್ಜಿ ತಿರಸ್ಕರಿಸಿದ್ದರಿಂದ ದಂಪತಿಯು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಮುಂದೆ ಚೋಳಮಂಡಲಂ ವಿಮಾ ಕಂಪನಿ ವಿರುದ್ಧ ತಮ್ಮ ಫಿರ್ಯಾದಿಯನ್ನು ಸಲ್ಲಿಸಿದ್ದರು.
ಈ ದೂರಿನ ಬಗ್ಗೆ ಆಯೋಗದ ಸದಸ್ಯರಾದ ಅಧ್ಯಕ್ಷ ಈಶ್ವರಪ್ಪ ಭೂತೆ ಹಾಗೂ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಸಿ ಹಿರೇಮಠ ಅವರು ಕೂಲಂಕಷವಾಗಿ ವಿಚಾರಣೆ ನಡೆಸಿ ಮೊದಲಿನಿಂದ ಕ್ಲೈಮುದಾರರು ಯಾವುದೇ ರೋಗ ರುಜಿನದಿಂದ ಬಳಲುತ್ತಿದ್ದರು ಮತ್ತು ಆ ಸಂಗತಿಯನ್ನು ವಿಮಾ ಕಂಪನಿಯವರ ಮುಂದೆ ಹೇಳದೆ ಬಚ್ಚಿಟ್ಟಿದ್ದಾರೆ ಎನ್ನುವ ಸಂಗತಿಯನ್ನು ರುಜುವಾತು ಪಡಿಸಲು ವಿಮಾ ಕಂಪನಿಯವರು ವಿಫಲರಾಗಿದ್ದಾರೆ ಎಂದು ಆಯೋಗ ಅಭಿಪ್ರಾಯಪಟ್ಟು ಈ ಆದೇಶ ನೀಡಿದೆ.
ದಂಪತಿಯು ತೆಗೆದುಕೊಂಡಿರುವ ವಿಮಾ ಪಾಲಿಸಿ ಚಾಲ್ತಿ ಇರುವುದರಿಂದ ಅವರ ಅನಾರೋಗ್ಯದ ಚಿಕಿತ್ಸೆಯ ಆಸ್ಪತ್ರೆಯ ಖರ್ಚು ವೆಚ್ಚವನ್ನು ಭರಿಸುವುದು ವಿಮಾ ಕಂಪನಿಯ ಕರ್ತವ್ಯವಾಗಿದೆ. ಆದರಂತೆ ಕರ್ತವ್ಯ ನಿರ್ವಹಣೆಯಿಂದ ನುಣುಚಿಕೊಳ್ಳುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ದೂರುದಾರರಿಬ್ಬರ ಆಸ್ಪತ್ರೆಯ ಖರ್ಚು ವೆಚ್ಚ ₹ 1,08,565 ಅವರಿಗೆ ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ಸಂದಾಯ ಮಾಡುವಂತೆ ವಿಮಾ ಕಂಪನಿಗೆ ಆಯೋಗ ಆದೇಶಿಸಿದೆ.
ಕ್ಲೈಮು ತಿರಸ್ಕಾರದಿಂದ ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ಪ್ರತಿಯೊಬ್ಬರಿಗೆ ತಲಾ ರೂ. 25,000 ರಂತೆ ಒಟ್ಟು ರೂ. 50,000 ಪರಿಹಾರ ಮತ್ತು ರೂ. 10,000 ಅವರ ಪ್ರಕರಣ ನಡೆಸಿದ ಖರ್ಚು ವೆಚ್ಚ ಕೊಡುವಂತೆ ವಿಮಾ ಕಂಪನಿಗೆ ನೀಡಿದ ಆದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿ: ಕುಮಟಾದಲ್ಲಿ ಪುನಿತ್ ಅಭಿಮಾನಿಗಳ ಮಹತ್ವದ ಕಾರ್ಯ: ಗ್ರಂಥಾಲಯವಾದ ಬಸ್ ನಿಲ್ದಾಣ