ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಹುಬ್ಬಳ್ಳಿ- ಧಾರವಾಡದ ಪ್ರತಿಷ್ಠಿತ ಬಿ.ಆರ್.ಟಿ.ಎಸ್ ಯೋಜನೆ ಈಗ ಸರ್ಕಾರಕ್ಕೆ ತಲೆನೋವಾಗಿದೆ. ಉಚಿತ ಬಸ್ ಪ್ರಯಾಣದ ಭರವಸೆ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರದಿಂದ ಈಗ ಚಿಗರಿ ಚಿಂತಿಸುವ ಕಾಲಘಟ್ಟಕ್ಕೆ ಬಂದು ತಲುಪಿದೆ.
ಹುಬ್ಬಳ್ಳಿ- ಧಾರವಾಡ ವ್ಯಾಪ್ತಿಯ ಚಿಗರಿ ಬಸ್, ಸಾರಿಗೆ ವ್ಯಾಪ್ತಿಯ ಹವಾ ನಿಯಂತ್ರಿತ ಬಸ್ ಆಗಿದ್ದು, ಚಿಗರಿ ಬಸ್ನಲ್ಲೂ ಫ್ರೀ ಬಿಡಬೇಕು ಎಂಬ ಮಾತು ಕೇಳಿಬಂದಿದೆ. ಆದರೆ ಹುಬ್ಬಳ್ಳಿ- ಧಾರವಾಡ ನಡುವೆ ಸಂಚರಿಸುವ ಹವಾನಿಯಂತ್ರಿತ ಚಿಗರಿ ಬಸ್ನಲ್ಲಿ ಸರ್ಕಾರ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿಲ್ಲ. ಸರ್ಕಾರ ಆದೇಶ ಹೊರಡಿಸಿದಂತೆ ಹವಾನಿಯಂತ್ರಿತ ಬಸ್ನಲ್ಲಿ ಫ್ರೀ ಇಲ್ಲ. ಹೀಗಿದ್ದರೂ ಬಿ.ಆರ್.ಟಿ.ಎಸ್ ಸಾರಿಗೆಯನ್ನು ಶಕ್ತಿ ಸ್ಕೀಮ್ನಲ್ಲಿ ಅನುಮತಿ ನೀಡಲು ಮನವಿ ಮಾಡಿದ್ದೇವೆ ಎನ್ನುತ್ತಾರೆ ಸಾರಿಗೆ ಸಂಸ್ಥೆಯ ಎಂಡಿ ಭರತ್.
ಸದ್ಯ ಇರುವ ಆದೇಶದಂತೆ ಚಿಗರಿ ಬಸ್ನಲ್ಲಿ ಫ್ರೀ ಇಲ್ಲ. ಆದರೆ ನಾವು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಚಿಗರಿ ಹವಾ ನಿಯಂತ್ರಿತ ಬಸ್ ಆಗಿರುವ ಕಾರಣ ಸಹಜ ನಷ್ಟದಲ್ಲಿದೆ. ಇತ್ತ ಮಹಿಳೆಯರು ಚಿಗರಿ ಬಸ್ನಲ್ಲೂ ಫ್ರೀ ಪ್ರಯಾಣಕ್ಕೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಹುಬ್ಬಳ್ಳಿ- ಧಾರವಾಡ ಜನತೆ ಚಿಗರಿ ಬಸ್ನಲ್ಲಿ ಜಾಸ್ತಿ ಓಡಾಡುವ ಹಿನ್ನೆಲೆಯಲ್ಲಿ ಫ್ರೀ ಬಿಟ್ಟರೆ ಅನುಕೂಲ ಆಗುತ್ತದೆ ಎನ್ನುತ್ತಿದ್ದಾರೆ. ಆದರೆ ಸರ್ಕಾರದ ಆದೇಶದವರೆಗೂ ಉಚಿತ ಪ್ರಯಾಣಕ್ಕೆ ಅನುಮತಿ ಇಲ್ಲ ಎಂದರು.
ಬಿಆರ್ಟಿಎಸ್ ಕುರಿತು..: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಮಧ್ಯದಲ್ಲಿ ಸುಸ್ಥಿತ ಸಾರಿಗೆ ಕಲ್ಪಿಸುವುದಕ್ಕಾಗಿ ಕೈಗೆತ್ತಿಕೊಳ್ಳಲಾಗಿರುವ 'ಹುಬ್ಬಳ್ಳಿ-ಧಾರವಾಡ ತ್ವರಿತ ಬಸ್ ಸಾರಿಗೆ ವ್ಯವಸ್ಥೆ' (Hubballi-Dharwad Bus Rapid Transit system (HDBRTS) ದೇಶದಲ್ಲಿಯೇ ವಿಶಿಷ್ಠವಾಗಿರುವ ಯೋಜನೆಯಾಗಿದ್ದು, ಅನುಷ್ಠಾನಕ್ಕಾಗಿ ಕಂಪನಿ ಕಾಯ್ದೆಯಡಿ ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್ ಕಂಪನಿ ನಿಯಮಿತ ಎಂದು 2012 ರಲ್ಲಿ ನೋಂದಣಿಯಾಗುವ ಮೂಲಕ ತನ್ನ ಕಾರ್ಯ ಚಟುವಟಿಕೆ ನಿರ್ವಹಿಸುತ್ತಿದೆ.
ಹು-ಧಾ ತ್ವರಿತ ಬಸ್ ಸಾರಿಗೆ ಶೀಘ್ರ, ಸುರಕ್ಷಿತ, ಸುಖಕರ ಹಾಗೂ ಕೈಗೆಟುಕುವ ದರದಲ್ಲಿ ಹೆಚ್ಚು ಪ್ರಯಾಣಿಕರನ್ನು ನಿರ್ದಿಷ್ಟ ಸಮಯದಲ್ಲಿ ನಿಗದಿತ ಸ್ಥಳಕ್ಕೆ ತಲುಪಿಸುವ ಉದ್ದೇಶ ಹೊಂದಿದೆ. ಇದನ್ನು ರಸ್ತೆ ಮೇಲೆ ಚಲಿಸುವ ಮೆಟ್ರೋ ವಿಧಾನ ಎಂದು ಸಹ ಕರೆಯಬಹುದು. ಯೋಜನೆಯಡಿ ಖರೀದಿಸಲಾದ ವೋಲ್ವೊ ಬಸ್‍ಗಳಿಗೆ ಸ್ಥಳೀಯ ನಾಗರಿಕರು ಸೂಚಿಸಿದಂತೆ 'ಚಿಗರಿ' ಎಂದು ಹೆಸರಿಸಲಾಗಿದೆ.
ಯೋಜನೆಯ ವಿನ್ಯಾಸದಂತೆ ಈಗಾಗಲೇ ಎಲ್ಲ ಮೂಲಭೂತ ಸೌಕರ್ಯದ ಕಾಮಗಾರಿಗಳನ್ನು ಪೂರ್ಣಗೊಳಿಸಿ 2018ರ ಒಕ್ಟೋಬರ್ನಿಂದಲೇ ಯೋಜನೆಯು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಹಯೋಗದೊಂದಿಗೆ 'ಚಿಗರಿ' ಬಸ್‍ಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಹುಬ್ಬಳ್ಳಿ ಧಾರವಾಡ ನಡುವೇ ಒಟ್ಟು 96 ಬಿಆರ್ಟಿಎಸದ ಬಸ್ಗಳು ಓಡಾಟ ನಡೆಸುತ್ತಿವೆ. ಪ್ರತಿ ದಿಕ್ಕಿನಿಂದ 125 ರಿಂದ 130 ಟ್ರಿಪ್‌ಗಳನ್ನು ಈಗ ಓಡಿಸಲಾಗುತ್ತಿದ್ದು, ಪ್ರಯಾಣಿಕರ ಬೇಡಿಕೆ ಆಧರಿಸಿ ಇದನ್ನು ಹೆಚ್ಚಿಸಲಾಗುತ್ತಿದೆ.
BRTS ಸೇವೆಯನ್ನು ಮರುಪ್ರಾರಂಭಿಸುವ ಮೊದಲು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಹಲವಾರು ಬಸ್‌ಗಳನ್ನು ನಗರ ವ್ಯಾಪ್ತಿಯಲ್ಲಿ ಓಡಿಸಲಾಗುತ್ತಿತ್ತು. ಈಗ ಹೊಸ ಪ್ರದೇಶಗಳಿಗೆ ಹೆಚ್ಚಿನ ಸಿಟಿ ಬಸ್‌ಗಳನ್ನು ಪರಿಚಯಿಸಲಾಗುತ್ತಿದೆ. ಅದರ ಜೊತೆಗೆ NWKRTC ಯ 24 ಸಿಟಿ ಬಸ್ಗಳು ಸಂಚರಿಸುತ್ತಿವೆ. ಬಿಆರ್ಟಿಎಸ್ ಹಾಗೂ NWKRTC ಯಲ್ಲಿ ಸುಮಾರು 80 -90 ಸಾವಿರ ಜನ ನಿತ್ಯ ಸಂಚರಿಸುತ್ತಾರೆ. NWKRTC ಬಸ್ಗಳಲ್ಲಿ ಕೂಡ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಆದರೆ ಶಕ್ತಿ ಯೋಜನೆ ಚಿಗರಿ ಬಸ್ಗೆ ಅನ್ವಯವಾದರೆ ಸಿಟಿ ಬಸ್ಗಳು ಖಾಲಿ ಹೊಡೆಯುವ ಸಾಧ್ಯತೆ ಹೆಚ್ಚಿದೆ. ಚಿಗರಿ ಬಸ್ನಲ್ಲಿ ಪ್ರಯಾಣಕ್ಕೆ ಅವಕಾಶ ನೀಡಿದರೆ ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಫ್ರೀ ಎಸಿ ಬಸ್‌ಗಳನ್ನು ಹೆಚ್ಚಾಗಿ ಅವಲಂಬಿಸಿದರೆ ಹೇಗೆ ಎಂಬ ಆತಂಕ ಮೂಡುತ್ತಿದ್ದು, ಸರ್ಕಾರ ನಡೆ ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಪ್ರಯಾಣ: ಖಾಸಗಿ ಬಸ್ ಮಾಲೀಕರಿಗೆ ದಿವಾಳಿ ಆತಂಕ