ಹುಬ್ಬಳ್ಳಿ : ಚಂದ್ರಶೇಖರ ಗುರೂಜಿ ಅವರಿಗೆ ಹಂತಕರು ಕುತ್ತಿಗೆ ಬಳಿ ಎರಡು ಬಾರಿ 12 ಇಂಚಿನಷ್ಟು ಕೊಯ್ದಿದ್ದು, ಚಾಕು 2-3 ಇಂಚಿನಷ್ಟು ಒಳಗೆ ಹೋಗಿ ಗಾಯವುಂಟಾಗಿದ್ದು, ಇರಿದ ಜಾಗದಲ್ಲೇ 2-3 ಬಾರಿ ಇರಿದಿದ್ದಾರೆ. ಒಟ್ಟು 42 ಕಡೆಗಳಲ್ಲಿ ಇರಿದ ಗಾಯಗಳಿವೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಹೇಳಲಾಗಿದೆ ಎಂದು ವರದಿಯಾಗಿದೆ. ವಿಧಿ ವಿಜ್ಞಾನ ವಿಭಾಗದ ಡಾ. ಸುನೀಲ್ ಬಿರಾದಾರ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗುರೂಜಿ ಮರಣೋತ್ತರ ಪರೀಕ್ಷೆ ಮುಕ್ತಾಯ, ಅಂತ್ಯಕ್ರಿಯೆಗೆ ಶವ ರವಾನೆ : ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಗುರೂಜಿಯವರ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು ಶವವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಸುರಿಯುವ ಮಳೆಯ ನಡುವೆಯೇ ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಶವವನ್ನು ಮೆರವಣಿಗೆ ಮೂಲಕ ಸಾಗಿಸಲಾಗುತ್ತಿದೆ. ಶವಾಗಾರದಿಂದ ಶವವನ್ನು ಸಾಗಿಸುವಾಗ ಸಿಬ್ಬಂದಿ ಹಾಗೂ ಸಂಬಂಧಿಗಳು ಕಣ್ಣೀರು ಹಾಕಿದರು. ಸುಳ್ಳ ರಸ್ತೆಯ ಅಂತ್ಯಕ್ರಿಯೆ ಜಾಗದಲ್ಲಿ ಒಂದು ಗಂಟೆಗೂ ಅಧಿಕ ಕಾಲ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕುಟುಂಬ ಸದಸ್ಯರು ಅಂತ್ಯಕ್ರಿಯೆ ಸ್ಥಳಕ್ಕೆ : ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಅವರ ಕುಟುಂಬ ಸದಸ್ಯರು ಹಾಗೂ ಅವರ ಧರ್ಮಪತ್ನಿ ಅಂಕಿತಾ ಹಾಗೂ ಅವರ ಸಂಬಂಧಿಗಳು ಗೋಕುಲ್ ರೋಡ್ ಅಪಾರ್ಟ್ ನಿಂದ ತೆರಳಿದ್ದಾರೆ. ವೀರಶೈವ ಹಾಗೂ ಲಿಂಗಾಯತ ಧರ್ಮದ ಸ್ವಾಮಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಓದಿ : ಹುಬ್ಬಳ್ಳಿಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ.. ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಜೀವನ ಹೀಗಿತ್ತು