ಹುಬ್ಬಳ್ಳಿ: ಮಹದಾಯಿ, ಕಳಸಾ-ಬಂಡೂರಿ ಯೋಜನೆಗೆ ಅಧಿಸೂಚನೆ ಹೊರಡಿಸುವ ಸಂಬಂಧ ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಮಧ್ಯಪ್ರವೇಶಿಸುವಂತೆ ಒತ್ತಾಯಿಸಿ ರೈತ ಸೇನಾ ಕರ್ನಾಟಕ ರಾಜ್ಯ ಸಮಿತಿ ನೇತೃತ್ವದಲ್ಲಿ ರಾಜಭವನ ಚಲೋ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ರ್ಯಾಲಿ ಮುಖಾಂತರ ನರಗುಂದ ಮಹದಾಯಿ ಹೋರಾಟ ವೇದಿಕೆ ಮತ್ತು ಜಿಲ್ಲೆಯ ಹನ್ನೊಂದು ತಾಲೂಕಿನ ರೈತರು ಹಾಗೂ ರೈತ ಮಹಿಳೆಯರು ಮಹದಾಯಿ ಯೋಜನೆ ಜಾರಿಗೆ ಒತ್ತಾಯಿಸಿ, ಜು.16, 2015 ರಿಂದ ರೈತ ಸೇನಾ ಕರ್ನಾಟಕದ ನೇತೃತ್ವದಲ್ಲಿ ನಿರಂತರ ಹೋರಾಟ ಮಾಡುತ್ತಾ ಬಂದಿದ್ದರು. ಈ ಹೋರಾಟದಲ್ಲಿ ಹನ್ನೆರಡು ಜನ ರೈತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಕೂಡ ಕೇಂದ್ರ ಹಾಗೂ ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಜನತೆಯ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಖಂಡನೀಯವಾಗಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ರಾಜಕೀಯ ಪಕ್ಷಗಳು ತಮ್ಮ ವೈಯಕ್ತಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ಕೆಸರೆರಚಾಟ ಮಾಡುತ್ತಿರುವುದು ಸರಿಯಲ್ಲ ಎಂದು ರೈತರು ಘೋಷಣೆ ಕೂಗುವ ಮೂಲಕ ಅಸಮಾಧಾನ ಪ್ರದರ್ಶಿಸಿದ್ರು.
ಇದೆ ವೇಳೆ ಮಾತನಾಡಿದ ರೈತ ಮುಖಂಡರು, ಬಹಳ ದಿನಗಳಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿಕೊಂಡು ಬಂದಿರುವುದು ನೋವಿನ ಸಂಗತಿ. ಅಲ್ಲದೆ ನಮ್ಮ ಭಾಗದ ಜನ ಪ್ರತಿನಿಧಿಗಳಿಗೆ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ಮಹದಾಯಿ ಕಳಸಾ ಬಂಡೂರಿ ಅಧಿಸೂಚನೆ ಹೊರಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ರು.