ಹುಬ್ಬಳ್ಳಿ: ಕಾಂಗ್ರೆಸ್ ನಾಯಕರಿಗೆ ಜನಪರ ಚರ್ಚೆ ನಡೆಸಲು ಆಸಕ್ತಿ ಇಲ್ಲ. ಹಾಗಾಗಿ ಇಲ್ಲಸಲ್ಲದ ಆರೋಪ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಆರೋಪಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಜನಾರ್ಶೀವಾದ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಯುಪಿಎ ಅವಧಿಯಲ್ಲಿ ಬಿಜೆಪಿ ಜನತೆಯ ಪರವಾಗಿ ಸಂಸತ್ ಅಧಿವೇಶನದಲ್ಲಿ ಹೋರಾಡಿತ್ತು. 2ಜಿ ಹಗರಣ, ಕಲ್ಲಿದ್ದಲು ಹಗರಣಗಳ ಬಗ್ಗೆ ಪ್ರಶ್ನೆ ಮಾಡಿತ್ತು. ಆದರೆ ಇದೀಗ ಕಾಂಗ್ರೆಸ್ ಜನಪರ ಚರ್ಚೆ ಬಿಟ್ಟು ಆರೋಪ ಮಾಡುವುದರಲ್ಲಿಯೇ ಮುಳುಗಿದೆ ಎಂದು ಹರಿಹಾಯ್ದರು.
ಪೆಗಾಸಸ್ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ರೀತಿಯ ಚರ್ಚೆಗೆ ಸಿದ್ಧ ಎಂದು ಹೇಳಿದ್ದಾರೆ. ಅದಕ್ಕೆ ಕಾಂಗ್ರೆಸ್ ಬೆಲೆ ನೀಡಿಲ್ಲ. ಪೆಗಾಸಸ್ ಖರೀದಿ ಮಾಡಿಲ್ಲ ಎಂದು ಸ್ಪಷ್ಟವಾಗಿ ಸರ್ಕಾರ ಉತ್ತರ ನೀಡಿದೆ. ಆದರೆ ಉತ್ತರ ಕೇಳಿಸಿಕೊಳ್ಳುವ ವ್ಯವಧಾನವೂ ಇಲ್ಲದಂತೆ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ವರ್ತಿಸುತ್ತಿವೆ. ರಾಜಕೀಯ ಲಾಭದ ಲೆಕ್ಕಾಚಾರದ ಮೇಲೆ ಕಾಂಗ್ರೆಸ್ ಸಂಸತ್ತಿನಲ್ಲಿ ಗದ್ದಲ ಎಬ್ಬಿಸಿ ಮುಂಬರುವ ಉತ್ತರ ಪ್ರದೇಶ, ಪಂಜಾಬ್, ಉತ್ತರಖಂಡ ಚುನಾವಣೆಯಲ್ಲಿ ಲಾಭ ಆಗುತ್ತದೆ ಎಂದು ಕಾಂಗ್ರೆಸ್ ಲೆಕ್ಕ ಹಾಕಿದೆ. ಜನಪರ ಚರ್ಚೆಗಳಿಂದ ಮಾತ್ರ ಜನರ ಮನಮುಟ್ಟಲು ಸಾಧ್ಯ ಎಂದು ಕುಟುಕಿದರು.
ಕಾಂಗ್ರೆಸ್ ಕಚ್ಚಾ ತೈಲ ಬೆಲೆ ಕಡಿಮೆ ಇದೆ, ಪೆಟ್ರೋಲ್, ಡಿಸೇಲ್ ಹೆಚ್ಚಾಗಿದೆ ಎಂದು ಬಿಂಬಿಸುತ್ತಿದೆ. ಆದರೆ ಇದು ಸುಳ್ಳು, ಕಚ್ಚಾ ತೈಲದ ಬೆಲೆ ಪ್ರಸ್ತುತ ಹೆಚ್ಚಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ದೇಶದ ಅರ್ಥಿಕತೆಗೆ ಪೆಟ್ಟು ಬಿದ್ದಿದೆ ಎಂದರು.
ಹುಬ್ಬಳ್ಳಿ-ಧಾರವಾಡದಲ್ಲಿ ಕೌಶಲ್ಯ ಅಭಿವೃದ್ಧಿಗೆ ಪೂರಕ ವಾತಾವರಣ ಇದೆ. ಮುಂದಿನ ದಿನದಲ್ಲಿ ಅವಳಿನಗರದಲ್ಲಿ ಕೌಶಲ್ಯ ಅಭಿವೃದ್ಧಿ ಕ್ಷೇತ್ರದ ಕ್ಯಾಪಿಟಲ್ ರೂಪಿಸಲಾಗುವುದು ಎಂದರು.
ಓದಿ: 9-10ನೇ ತರಗತಿ ಪುನಾರಂಭಿಸಲು ಮಾರ್ಗಸೂಚಿ ಪ್ರಕಟ; ನಿತ್ಯವೂ ಅರ್ಧ ದಿನ ಭೌತಿಕ ಕ್ಲಾಸ್