ಹುಬ್ಬಳ್ಳಿ : ಫ್ಲೈ ಓವರ್ ನಿರ್ಮಾಣದ ಕುರಿತು ಇಂದು ಸ್ಥಳೀಯರ ಹಾಗೂ ತಜ್ಞರ ಸಲಹೆ, ಸೂಚನೆಗಳನ್ನು ಪಡೆದಿದ್ದೇವೆ. ಶಾಸಕ ಅರವಿಂದ ಬೆಲ್ಲದ್ ಹಾಗೂ ತಜ್ಞರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುವುದು ಎಂದು ಕೇಂದ್ರ ಗಣಿ-ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಚೆನ್ನಮ್ಮ ವೃತ್ತದಲ್ಲಿ ಫ್ಲೈಓವರ್ ನಿರ್ಮಾಣದ ಬಗ್ಗೆ ಸ್ಥಳೀಯರ ಸಲಹೆ, ದೂರುಗಳಿದ್ದರೆ ಅವುಗಳನ್ನು ಪರಿಗಣಿಸಲಾಗುವುದು. ನಿರ್ಮಾಣ ಕುರಿತಂತೆ ಜನವರಿಯಿಂದ ಅನೇಕ ಸಲಹೆಗಳು ಬಂದಿವೆ. ಅವುಗಳನ್ನೆಲ್ಲ ಪರಿಗಣಿಸಲಾಗುವುದು ಎಂದರು.
ಭಾರತ್ ಬಂದ್ಗೆ ಆಕ್ರೋಶ : ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ಗೆ ಜೋಶಿ ಕಿಡಿಕಾರಿದರು. ಅನೇಕ ಬಾರಿ ಬಂದ್ ನಡೆಸಿದ್ದಾರೆ. ಕೃಷಿ ಕಾಯ್ದೆಗಳು ರೈತರ ವಿರೋಧಿಯಲ್ಲ. ಪಂಜಾಬ್ ಹೊರತುಪಡಿಸಿ ಎಲ್ಲಿಯೂ ವಿರೋಧ ಮಾಡುತ್ತಿಲ್ಲ. ಬಂದ್ಗೆ ಕರೆ ನೀಡಿದವರಿಗೆ ದೇವರು ಒಳ್ಳೆ ಬುದ್ಧಿ ನೀಡಲಿ. ಕಾಯ್ದೆ ವಿಚಾರದಲ್ಲಿ ಸ್ವಾಮಿನಾಥನ್ ಅವರು ವರದಿ ನೀಡಿದ್ದಾರೆ. ಬಂದ್ ಕರೆಯಲ್ಲಿ ರೈತ ಮುಖಂಡರು ಇಲ್ಲ ಎಂದರು.
ನಮ್ಮ ಸರ್ಕಾರದಲ್ಲಿ ಬೆಲೆ ಏರಿಕೆ ಆಗಿಲ್ಲ : ಬೆಲೆ ಏರಿಕೆ ವಿಚಾರದ ಬಗ್ಗೆ ಮೊನ್ನೆ ನೋಟಿಸ್ ನೀಡಿ ಚರ್ಚೆ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ಇದ್ದಾಗ ಪ್ರತಿವರ್ಷ ಏರಿಕೆ ಆಗಿದೆ. ಮೋದಿ ಸರ್ಕಾರದಲ್ಲಿ ಕಳೆದ 7 ವರ್ಷದಲ್ಲಿ ಬೆಲೆ ಏರಿಕೆ ಆಗಿಲ್ಲ. ಈಗ ಹಲವು ವಿಚಾರದಲ್ಲಿ ಬೆಲೆ ಇಳಿಕೆ ಆಗುತ್ತಿದೆ. ಕೋವಿಡ್ ಹಿನ್ನೆಲೆ ಕೆಲವು ಬೆಲೆ ಏರಿಕೆ ಆಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಹ ಕಡಿಮೆ ಆಗುತ್ತದೆ. ಆ ನಂಬಿಕೆ ಇಟ್ಟುಕೊಂಡು ನಾವೂ ಕೆಲಸ ಮಾಡುತ್ತಿದ್ದೇವೆ ಎಂದರು.