ಧಾರವಾಡ : ಸಲಾಂ ಆರತಿಯನ್ನು ಬದಲಾಯಿಸಿದ್ದು ಸಂತೋಷದ ವಿಚಾರ. ಕನ್ನಡ ಭಾಷೆಯಲ್ಲೂ ನಮಸ್ಕಾರ ಎಂದು ಹೇಳುತ್ತಾರೆ. ಸಂಸ್ಕೃತದಲ್ಲೂ ನಮಸ್ಕಾರ ಎಂದು ಹೇಳುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಮುಮ್ಮಿಗಟ್ಟಿ ಬಳಿಯ IIT ವೀಕ್ಷಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುಲಾಮಿ ಸಂಸ್ಕೃತಿ ಕೈ ಬಿಡಬೇಕು, ನಮ್ಮ ಸಂಸ್ಕೃತಿ ಇಟ್ಟುಕೊಂಡು ಮುಂದೆ ಹೋಗಬೇಕು. ಈ ಕಾರಣಕ್ಕೆ ನಾನು ಸಲಾಂ ಆರತಿ ಕೈಬಿಟ್ಟಿರುವುದನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.
ಇನ್ನು, ಗುಜರಾತ್ ಮಾದರಿ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ಆಡಳಿತದಲ್ಲಿ ಗುಜರಾತ್ ಮಾದರಿ ಮಾಡಲು ನಮ್ಮ ಆಗ್ರಹ ಇದ್ದೇ ಇದೆ. ಕಳೆದ 8 ವರ್ಷದಿಂದ ನಾನು ಪ್ರಧಾನಿ ಅವರ ಜೊತೆ ಕೆಲಸ ಮಾಡುತ್ತಿದ್ದೇನೆ. ಒಳ್ಳೆಯ ಸಂಗತಿ ಎಲ್ಲೇ ನಡೆದರೂ ಅದನ್ನು ತೆಗೆದುಕೊಳ್ಳಬೇಕು. ಕರ್ನಾಟಕದಲ್ಲೂ ಗುಜರಾತ್ ಮಾದರಿಯನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ರಾಜಕೀಯವಾಗಿ ಅಭ್ಯರ್ಥಿಗಳನ್ನು ತೆಗೆದುಹಾಕುವ ಬಗ್ಗೆ ನಾನು ಈಗಲೇ ಏನೂ ಹೇಳುವುದಿಲ್ಲ. ಟಿಕೆಟ್ ಹಂಚುವ ಸಂದರ್ಭ ಬಂದಾಗ ಗೆಲುವು, ಪಕ್ಷದ ನಿಷ್ಠೆ, ಬಿಜೆಪಿ ಆಡಳಿತಕ್ಕೆ ಬದ್ಧತೆ, ನಡೆ ನುಡಿಯಲ್ಲಿ ಸ್ವಚ್ಛತೆ ಎಲ್ಲವನ್ನು ಪರಿಗಣಿಸಿ ಟಿಕೆಟ್ ನೀಡಲಾಗುತ್ತದೆ ಎಂದು ತಿಳಿಸಿದರು.
ಧಾರವಾಡದ ಐಐಟಿಗೆ ಭೇಟಿ ನೀಡಿ ಪರಿಶೀಲನೆ : ಧಾರವಾಡ ಹೊರವಲಯದ ಮುಮ್ಮಿಗಟ್ಟಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಐಐಟಿ ಕ್ಯಾಂಪಸ್ ಗೆ ಭೇಟಿ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನವರಿ ಮೊದಲ ವಾರದಲ್ಲಿ ಧಾರವಾಡ ಐಐಟಿ ಉದ್ಘಾಟನೆಗೆ ತೀರ್ಮಾನಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆಗೆ ಬರಲಿದ್ದಾರೆ. ಜನವರಿ ಒಂದನೇ ತಾರೀಕು ಉದ್ಘಾಟನೆ ಮಾಡಬೇಕು ಎಂದು ನಿರ್ಧರಿಸಲಾಗಿದ್ದು, ಕಟ್ಟಡ ಕಾಮಗಾರಿ ನಡೆದರೆ ಅದೇ ದಿನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಜನವರಿಯಲ್ಲಿ ಪ್ರಧಾನಿ ಮೋದಿಯವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ನಿಮಿತ್ತ ಈ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿದೆ. ಮುಂದಿನ ವಾರ ನಾನು ಮತ್ತೇ ಐಐಟಿಗೆ ಭೇಟಿ ನೀಡಿ ಮುಂದಿನ ಕಾರ್ಯಕ್ರಮದ ಬಗ್ಗೆ ತೀರ್ಮಾನ ಮಾಡುವುದಾಗಿ ಹೇಳಿದರು.
ಇದನ್ನೂ ಓದಿ : ಸಲಾಂ ಆರತಿ, ದೀವಟಿಕೆ ಸಲಾಂ ಸೇವಾ ಕಾರ್ಯಗಳ ಹೆಸರು ಬದಲಾವಣೆಗೆ ನಿರ್ಧಾರ: ಸಚಿವೆ ಶಶಿಕಲಾ ಜೊಲ್ಲೆ