ಧಾರವಾಡ: ಅತ್ಯಾಚಾರ ಸಂತ್ರಸ್ತೆ ಮನೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ತಾಲೂಕಿನ ಬೋಗೂರ ಗ್ರಾಮಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃತ ಬಾಲಕಿ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ಬಾಲಕಿ ಬದುಕುಳಿದಿಲ್ಲವಾದ ಕಾರಣ ಸರ್ಕಾರಿ ಪರಿಹಾರ ಬರುವುದಿಲ್ಲ, ಹೀಗಾಗಿ ನಾನು ಮತ್ತು ಶಾಸಕ ಅಮೃತ ದೇಸಾಯಿ ಸೇರಿ 1 ಲಕ್ಷ ರೂಪಾಯಿ ಪರಿಹಾರ ನೀಡುತ್ತೇವೆ. ಕುಟುಂಬ ನಿರ್ವಹಣೆಗೆ ಆಧಾರವಾಗಲಿ ಎಂದು ನಾವು ಕೊಡುತ್ತಿದ್ದೇವೆ.
ಈ ಘಟನೆ ಅತ್ಯಂತ ದುರಂತವಾಗಿದ್ದು, ಈಗಾಗಲೇ ಆತನನ್ನು ಬಂಧಿಸಲಾಗಿದೆ. ಅತ್ಯಂತ ಕಠಿಣವಾದ ಸೆಕ್ಷನ್ ಹಾಕಲಾಗಿದೆ. ಜಾಮೀನಿನ ಮೇಲೆ ಬರದಂತೆ ಕೇಸ್‌ಗಳನ್ನು ಹಾಕಲಾಗಿದೆ. ಅತ್ಯಂತ ಕಠಿಣ ಕ್ರಮ ಆಗಬೇಕು ಎಂಬುದು ನಮ್ಮಭಿಪ್ರಾಯವೂ ಆಗಿದೆ ಎಂದರು.
ಹಿಂದೆ ಆತನ ಮೇಲೆ ಯಾವುದೇ ದೂರುಗಳು ದಾಖಲಾಗಿಲ್ಲ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಅತ್ಯಂತ ಕಠಿಣ ಶಿಕ್ಷೆ ಇದೆ ಎಂದರು. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂಬ ದೂರು ಇದೆ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾಸ್ಪತ್ರೆ ಸರ್ಜನ್ ಬಳಿ ಮಾಹಿತಿ ಪಡೆಯಲಿದ್ದೇನೆ ಎಂದರು.