ಧಾರವಾಡ : ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಹೈವೋಲ್ಟೇಜ್ ಕ್ಷೇತ್ರ ಎಂದೇ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ಗುರುತಿಸಿಕೊಂಡಿದೆ. ಇದೀಗ ನಿನ್ನೆ ನಡೆದ ಈ ಕ್ಷೇತ್ರದ ಮತಯಂತ್ರಗಳು ತಡವಾಗಿ ಸ್ಟ್ರಾಂಗ್ ರೂಮ್ ಸೇರಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಗುರುದತ್ ಹೆಗಡೆ ಮಾಹಿತಿ ನೀಡಿದರು. ಈ ಕುರಿತು ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹು-ಧಾ ಸೆಂಟ್ರಲ್ ಕ್ಷೇತ್ರದ ಮತಯಂತ್ರಗಳು ಇಂದು ಬೆಳಗ್ಗೆ ಸ್ಟ್ರಾಂಗ್ ರೂಮ್ ಸೇರಿವೆ. ಬೆಳಗಿನ ಬಳಿಕ ಜಿಲ್ಲಾಡಳಿತ ಸ್ಟ್ರಾಂಗ್ ರೂಮ್ ಸೀಲ್ ಮಾಡಿದೆ ಎಂದು ಮಾಹಿತಿ ನೀಡಿದರು.
ಧಾರವಾಡ ಕೃಷಿ ವಿವಿಯಲ್ಲಿ ಸ್ಟ್ರಾಂಗ್ ರೂಮ್ ಸ್ಥಾಪಿಸಲಾಗಿದ್ದು, ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ನಿನ್ನೆ ಸಂಜೆ ಬಳಿಕವೂ ಮತದಾನ ನಡೆದಿದೆ. ಇದರಿಂದ ಡಿ ಮಸ್ಟರಿಂಗ್ ತಡವಾಗಿ ಆಗಿದ್ದು, ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಸ್ಕೂಲ್ಗೆ ನಿನ್ನೆ (ಬುಧವಾರ) ರಾತ್ರಿ ತಡವಾಗಿ ಡಿ ಮಸ್ಟರಿಂಗ್‌ಗೆ ಇವಿಎಂ ಬಂದಿದ್ದವು. ಹೀಗಾಗಿ ಮತಯಂತ್ರಗಳು ತಡವಾಗಿ ಎಣಿಕೆ ಕೇಂದ್ರಕ್ಕೆ ಬಂದಿವೆ. ಮತಯಂತ್ರಗಳನ್ನು ಸ್ಟ್ರಾಂಗ್ ರೂಮ್‌ನಲ್ಲಿಟ್ಟು ಸೀಲ್ ಮಾಡಲಾಗಿದೆ. ಉಳಿದ ಆರು ಕ್ಷೇತ್ರಗಳ ಸ್ಟ್ರಾಂಗ್ ರೂಮ್ ನಿನ್ನೆಯೇ ಸೀಲ್ ಮಾಡಲಾಗಿದೆ ಎಂದು ಡಿಸಿ ತಿಳಿಸಿದರು.
ನವಲಗುಂದ ಹಾಗೂ ಹು-ಧಾ ಕೇಂದ್ರದಲ್ಲಿ ಸಂಜೆ ವೇಳೆಗೆ ಮತದಾರರ ಆಗಮನ ಹೆಚ್ಚಾಗಿತ್ತು. ಹೀಗಾಗಿ ಮತದಾನ ಪ್ರಕ್ರಿಯೆ ತಡವಾಗಿದೆ. ಮೈನರ್ ಸಮಸ್ಯೆಗಳಾಗಿವೆ. ಆದರೆ ಮೇಜರ್ ಸಮಸ್ಯೆಗಳು ಆಗಿಲ್ಲ ಯಾವುದೇ 1000 ಕ್ಕಿಂತ ಹೆಚ್ಚಿನ ಮತದಾರರಿರುವ ಬೂತ್ ಗಳಲ್ಲಿ ತಡವಾಗಿದೆ. ಆದರೂ ಎಲ್ಲರಿಗೂ ಮತ ಹಾಕಲು ಅವಕಾಶ ನೀಡಿದ್ದೇವೆ. ಕಳೆದ ಆರು ತಿಂಗಳಲ್ಲಿ ಯಾವ ಮತದಾರರ ಪಟ್ಟಿಯೂ ಕ್ಯಾನ್ಸಲ್ ಆಗಿಲ್ಲ. ಮತದಾರ ಪಟ್ಟಿಯನ್ನು ಚೆಕ್ ಮಾಡಿಕೊಳ್ಳಲು ಮೊದಲಿನಿಂದಲೂ ಜಾಗೃತಿ ಮೂಡಿಸುತ್ತ ಬಂದಿದ್ದೀವೆ. ನಮ್ಮ ಕಡೆಯಿಂದಲೂ ಸಹ ತಪ್ಪುಗಳಾಗಿವೆ ಎಂದು ಗುರುದತ್ ಹೆಗಡೆ ವಿವರಿಸಿದರು.
ನಿನ್ನೆ ಮತದಾನ ಎಲ್ಲಾ ಮುಗಿದಿದ್ದು, ಈ ಬಾರಿ ಜಿಲ್ಲೆಯಲ್ಲಿ ಶೇ.74 ರಷ್ಟು ಮತದಾನ ಆಗಿದೆ. ಇನ್ನು ಲೆಕ್ಕ ಮಾಡುತ್ತಿದ್ದು, ಕಳೆದ ಬಾರಿಗಿಂತ ಶೇ. 3 ರಿಂದ 4 ರಷ್ಟು ಮತದಾನ ಜಾಸ್ತಿ ಆಗಿದೆ. ಮತದಾನ ಮಾಡಿದ ಎಲ್ಲಾ ಮತದಾರರಿಗೂ ಗುರುದತ್ ಹೆಗಡೆ ಧನ್ಯವಾದ ಹೇಳಿದರು.
ಏಣಿಕೆ ಕಾರ್ಯ ಸಿದ್ಧತೆ : ಮೇ 13 ರಂದು ಕೌಂಟಿಂಗ್ ಬೆಳಗ್ಗೆ 7 ಗಂಟೆಯಿಂದ ಆರಂಭವಾಗುತ್ತಿದ್ದು, ಅಂಚೆ ಮತದಾನವನ್ನು 6.59 ರವರೆಗೆ ತೆಗೆದುಕೊಳ್ಳಲು ನಮಗೆ ಅವಕಾಶ ಇದೆ. ಕೇಂದ್ರದಲ್ಲಿ 14 ಟೇಬಲ್ ಇಟ್ಟುಕೊಂಡಿದ್ದೇವೆ. 375 ಜನ ಅಧಿಕಾರಿ ಸಿಬ್ಬಂದಿ ಇದ್ದಾರೆ. ಪ್ರತಿ ಟೇಬಲ್ಗೆ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ ಎಂದು ಗುರುದತ್ ಹೆಗಡೆ ತಿಳಿಸಿದರು.
ಪಕ್ಷಗಳ ಏಜೆಂಟ್ರಿಗೆ ಅಲ್ಲಿ ಕುಳಿತು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ. ಸಶಸ್ತ್ರ ಸೀಮಾ ಬಲ ಹಾಗೂ ರಾಜ್ಯ ಪೊಲೀಸ್ ಸೇರಿ ಮೂರು ವಿಧದ ಭದ್ರತೆ ತೆಗೆದುಕೊಂಡಿದ್ದೇವೆ. ಅಭ್ಯರ್ಥಿಗಳು ಆರ್.ಒ ಕಡೆ ಐಡಿ ಕಾರ್ಡ್ ತೆಗೆದುಕೊಂಡು ಬರಬೇಕು. ಮತ ಎಣಿಕೆ ವೇಳೆ ಯಾವುದೇ ಅಹಿತಕರ ಘಟನೆ ಆಗದಂತೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, 144 ಸೆಕ್ಷನ್ ಜಾರಿ ಇರುತ್ತೆ. ಕ್ಯಾಂಪಸ್ ಹೊರಗಡೆ ಗೆಲುವನ್ನು ಸಂಭ್ರಮ ಆಚರಣೆ ಮಾಡಿಕೊಳ್ಳಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹೇಳಿದರು.
ಮತದಾನ ಮಾಡಿದ ಬಳಿಕ ವೃದ್ಧೆ ಸಾವು : ಮತದಾನ ಮಾಡಿ ನಂತರ ವೃದ್ಧೆಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ನಡೆದಿದೆ. ಅಣ್ಣಿಗೇರಿಯ ಮಹಬೂಬಿ ಬೆಟಗೇರಿ (68) ಮೃತರು. ನಿನ್ನೆ ಮದ್ಯಾಹ್ನ ವೇಳೆ ಸುಡು ಬಿಸಿಲಲ್ಲೂ ಮೃತ ಮೆಹಬೂಬಿ ಮತದಾನ ಮಾಡಲು ಬಂದಿದ್ದರು. ಮತದಾನ ಬಳಿಕ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಿಸದೆ ಮಹಬೂಬಿ ಇಂದು ಮೃತಪಟ್ಟಿದ್ದಾರೆ.
ಇದನ್ನೂ ಓದಿ : ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ, ಆಪರೇಷನ್ ಕಮಲದ ಅಗತ್ಯವೂ ಇರಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ