ಹುಬ್ಬಳ್ಳಿ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಗುಣಮಟ್ಟದ ಹೆಸರುಕಾಳು ಮತ್ತು ಉದ್ದು ಬೆಳೆಯನ್ನು ಖರೀದಿಸಲು ಒಪ್ಪಿಗೆ ಸೂಚಿಸಿದೆ. ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ರಾಜ್ಯದ ನಾನಾ ಭಾಗಗಳಲ್ಲಿ 36,390 ಮೆಟ್ರಿಕ್ ಟನ್ ಹೆಸರು ಹಾಗೂ 9,245 ಮೆಟ್ರಿಕ್ ಟನ್ ಉದ್ದುಅನ್ನು ರೈತರಿಂದ ಖರೀದಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ರೈತರಿಗೆ ಈ ಸಿಹಿ ಸುದ್ದಿಯನ್ನು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಸರ್ಕಾರದ ಆದೇಶದಂತೆ ಧಾರವಾಡ ಜಿಲ್ಲೆಯಾದ್ಯಂತ ಕಳೆದ ಬಾರಿಯಂತೆ ಈ ಸಾಲಿನಲ್ಲೂ ಹೆಸರು ಮತ್ತು ಉದ್ದು ಖರೀದಿ ಕೇಂದ್ರಗಳನ್ನು ತೆರೆಯಲು ಸೂಚಿಸಲಾಗಿದೆ. ನಾಫೆಡ್ ಸಂಸ್ಥೆಯನ್ನು ಕೇಂದ್ರದ ಖರೀದಿ ಸಂಸ್ಥೆಯನ್ನಾಗಿ ಮಾಡಿದೆ. ಇನ್ನು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ (ಮಾರ್ಕ್ಫೆಡ್) ಮತ್ತು ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ ಸಂಸ್ಥೆಗಳನ್ನು ರಾಜ್ಯದ ವತಿಯಿಂದ ಖರೀದಿ ಸಂಸ್ಥೆಗಳನ್ನಾಗಿ ನೇಮಿಸಿದೆ. ರಾಜ್ಯ ಸರ್ಕಾರವು ನಿಗದಿಪಡಿಸಿದ ದಿನಾಂಕದಿಂದ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಲಾಗಿದೆ ಎಂದು ವಿವರಿಸಿದ್ದಾರೆ.
ನೋಂದಣಿ ಜೊತೆಗೆ ಖರೀದಿಯೂ ಆರಂಭ : ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು. ಗುಣಮಟ್ಟದ ಹೆಸರು ಮತ್ತು ಉದ್ದು ಕಾಳನ್ನು ಖರೀದಿಸತಕ್ಕದ್ದು ಎಂದು ತಿಳಿಸಿದ್ದಾರೆ. ವಿವರಗಳನ್ನು ಬೆಂಬಲ ಬೆಲೆ ಯೋಜೆಯಡಿ ನೋಂದಣಿ ಮಾಡಲು ಸಿದ್ದಪಡಿಸಿದ ತತ್ರಾಂಶಕ್ಕೆ ವಿದ್ಯುನ್ಮಾನ ರೀತಿಯಲ್ಲಿ ಒದಗಿಸಲಾಗುತ್ತದೆ. ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯು ಸಂಬಂಧಪಟ್ಟ ಜಿಲ್ಲೆಯಲ್ಲಿ ಅವಶ್ಯಕತೆಗನುಗುಣವಾಗಿ ಖರೀದಿ ಕೇಂದ್ರಗಳ ಸಂಖ್ಯೆಯನ್ನು ತೆರೆಯಲು ನಾಫೆಡ್ ಸಂಸ್ಥೆಯೊಂದಿಗೆ ಸಮಾಲೋಚಿಸಿ ನಿರ್ಧರಿಸಬೇಕು. ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ಜಮಾ ಆಗುವಂತೆ ಹಣ ಪಾವತಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ.
ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ಹೆಸರುಕಾಳು ಖರೀದಿಸಬಾರದು. ಖರೀದಿ ಸಂಸ್ಥೆ ಯಾವುದೇ ರೀತಿಯ ದುರುಪಯೋಗ ಆಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಬೆಂಬಲಬೆಲೆ ಯೋಜನೆ ಮಾರ್ಗಸೂಚಿ ಹಾಗೂ ಆವರ್ತ ನಿಧಿ ಮಾರ್ಗಸೂಚಿಗಳನ್ನು ಕಡ್ಡಯವಾಗಿ ಪಾಲಿಸಬೇಕು ಎಂದೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ಅಗತ್ಯಕ್ಕೆ ತಕ್ಕಂತೆ ಖರೀದಿಕೇಂದ್ರ ತೆರೆಯಬೇಕು: ಖರೀದಿ ಸಂಸ್ಥೆಗಗಳು ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತೆ ಕಾರ್ಯ ನಿರ್ವಹಿಸಬೇಕು. ನಾಫೆಡ್ ಮಾರ್ಗಸೂಚಿಯನ್ವಯ ಹಾಗೂ ತಾಂತ್ರಿಕ ಮತ್ತು ವೈಜ್ಞಾನಿಕ ಸೌಲಭ್ಯದಿಂದ ಕೂಡಿರುವ ಗೋದಾಮುಗಳನ್ನು ಹೊಂದಿರುವ ಸದೃಢ ಸಂಸ್ಥೆಗಳ ಮುಖಾಂತರ ಹೊಂದಾಣಿಕೆ ಮಾಡಿಕೊಂಡು ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದೂ ಸಚಿವ ಜೋಶಿ ಹೇಳಿದ್ದಾರೆ. ಈ ನನ್ನ ಕೋರಿಕೆಗೆ ಸ್ಪಂದಿಸಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು.
ಓದಿ: ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್ನಲ್ಲಿ ರೈತರ ಪ್ರತಿಭಟನಾ ಧರಣಿ