ಧಾರವಾಡ : ಹೆಬ್ಬಳ್ಳಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಮಾಜಿ ಸಚಿವ ವಿನಯ್ ಕುಲಕರ್ಣಿ ಸೋದರ ಮಾವ ಚಂದ್ರಶೇಖರ ಇಂಡಿ ಅವರನ್ನು ನಿನ್ನೆ ವಿಜಯಪುರದಲ್ಲಿ ವಶಕ್ಕೆ ಪಡೆದಿರುವ ಸಿಬಿಐ, ಅವರನ್ನು ತಡರಾತ್ರಿ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ. ಇಂದು ಬೆಳಗ್ಗೆ ಉಪನಗರ ಠಾಣೆಗೆ ಸಿಬಿಐ ಅಧಿಕಾರಿಗಳು ಆಗಮಿಸಿದ್ದು, ವಿಚಾರಣೆ ಮುಂದುವರೆಯಲಿದೆ.
ಇದನ್ನೂ ಓದಿ:4 ವರ್ಷದ ಮಗುವಿನ ಮೇಲೆ 13 ವರ್ಷದ ಬಾಲಕನಿಂದ ಅತ್ಯಾಚಾರ
ಹತ್ಯೆಗೆ ಶಸ್ತ್ರಾಸ್ತ್ರ ಪೂರೈಕೆಯ ಆರೋಪದ ಮೇಲೆ ಚಂದ್ರಶೇಖರ ಇಂಡಿಯನ್ನು ವಶಕ್ಕೆ ಪಡೆದುಕೊಂಡಿರುವ ಸಿಬಿಐ, ಇಂದು ಅವರ ಆರೋಗ್ಯ ತಪಾಸಣೆ ನಡೆಸಿ, ಬಳಿಕ ನ್ಯಾಯಾಧೀಶರ ಎದುರು ಹಾಜರು ಪಡಿಸುವ ಸಾಧ್ಯತೆಯಿದೆ.
ಉಪನಗರ ಠಾಣೆಗೆ ಬಸವರಾಜ ಮುತ್ತಗಿ : ಹತ್ಯೆಗೆ ಭೀಮಾ ತೀರದಿಂದ ಪಿಸ್ತೂಲ್ ಪೂರೈಕೆ ವಿಚಾರವಾಗಿ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು, ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿಯನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಇಂದು ಸಹ ಧಾರವಾಡ ಉಪನಗರ ಠಾಣೆಗೆ ಬಸವರಾಜ ಮುತ್ತಗಿ ಆಗಮಿಸಿದ್ದು, ಅಧಿಕಾರಿಗಳು ಶಸ್ತ್ರಾಸ್ತ್ರ ಪೂರೈಕೆ ವಿಚಾರವಾಗಿ ವಿಚಾರಣೆ ಮುಂದುವರೆಸಿದ್ದಾರೆ.
ಜಿಪಂ ಸದಸ್ಯ ಯೋಗೇಶ್ ಗೌಡ ಹತ್ಯೆಗೆ ಭೀಮಾ ತೀರದಿಂದ ಪಿಸ್ತೂಲ್ ಪೂರೈಕೆಯಾಗಿತ್ತಾ ಎಂಬ ವಿಚಾರವಾಗಿ ಬಸವರಾಜ ಮುತ್ತಗಿ ಹಾಗೂ ಚಂದ್ರಶೇಖರ್ ಇಂಡಿ ಇಬ್ಬರನ್ನೂ ಸಿಬಿಐ ತೀವ್ರ ವಿಚಾರಣೆಗೆ ಒಳಪಡಿಸಲಿದೆ ಎಂದು ತಿಳಿದು ಬಂದಿದೆ.