ಧಾರವಾಡ: ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಕರ್ನಾಟಕ ಪ್ರಾಂತದ ಕಚೇರಿಗಳಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ತನಿಖೆ ಶುರು ಮಾಡಿದೆ. ಕಳೆದೊಂದು ವಾರದಿಂದ ಬೀಡುಬಿಟ್ಟಿರುವ ತನಿಖಾಧಿಕಾರಿಗಳು ಧಾರವಾಡದ ಹಿಂದಿ ಪ್ರಚಾರ ಸಭಾದ 50ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಕೇಂದ್ರ ಸರ್ಕಾರದ 22 ಕೋಟಿ ರೂ.ಗೂ ಹೆಚ್ಚು ಹಣ ದುರ್ಬಳಕೆ ಮಾಡಿರುವ ಆರೋಪವನ್ನು ಪ್ರಚಾರ ಸಭಾ ಎದುರಿಸುತ್ತಿದೆ. ಪ್ರಕರಣವನ್ನು ಕೇಂದ್ರ ಸರ್ಕಾರ ಸಿಬಿಐ ತನಿಖೆಗೆ ವಹಿಸಿತ್ತು. ಸಿಬಿಐ ತಂಡವು ಸಭಾದ ವಿವಿಧ ವ್ಯಾಪ್ತಿಯಲ್ಲಿ ವಿಚಾರಣೆ ನಡೆಸುತ್ತಿದೆ. ನೂರಾರು ಫೈಲ್‌ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದೆ. ಧಾರವಾಡ ಪ್ರಾಂತ ಕಚೇರಿ ಗೋವಾ ವ್ಯಾಪ್ತಿ ಹೊಂದಿದೆ. ಅಲ್ಲಿಗೂ ಸಹ ತೆರಳಿ ತನಿಖೆ ಕೈಗೊಂಡಿದೆ. ಗೋವಾ ಹಾಗೂ ಮೈಸೂರಿನಲ್ಲಿ ಹಳೆಯ ಆಡಳಿತ ಮಂಡಳಿ ಕೆಲವು ಆಸ್ತಿ ಮಾರಾಟ ಮಾಡಿ, ಹಣ ದುರ್ಬಳಕೆ ಮಾಡಿಕೊಂಡ ಆರೋಪದ ತನಿಖೆ ನಡೆಯುತ್ತಿದೆ.
2004ರಿಂದ 2020ರವರೆಗಿನ ಆಡಳಿತ ಮಂಡಳಿಯ ಅವಧಿಯಲ್ಲಿ ನಡೆದ ಅನುದಾನ ದುರ್ಬಳಕೆ ಬಗ್ಗೆ ತನಿಖೆ ನಡೆಯುತ್ತಿದೆ. ಅಡಿಟ್ ಮತ್ತು ಅಕೌಂಟ್ ಡಿಟೇಲ್ಸ್‌ನಲ್ಲಿ ಅನೇಕ ವ್ಯತ್ಯಾಸ ಕಂಡುಬಂದಿದ್ದು, ಪ್ರತಿ ಫೈಲ್ ಅನ್ನೂ ಸಿಬಿಐ ಶೋಧಿಸುತ್ತಿದೆ.
ಸಿಬಿಐ ಕರ್ನಾಟಕ ಪ್ರಾಂತದ ಎಲ್ಲ ಶಾಲಾ, ಕಾಲೇಜುಗಳಿಗೂ ತೆರಳಿ ಪರಿಶೀಲನೆ ಮಾಡುತ್ತಿದೆ. ಹಿಂದಿನ ಆಡಳಿತ ಮಂಡಳಿಯ ಸದಸ್ಯರು ಭಾಗಿಯಾದ ಬಗ್ಗೆ ಮಾಹಿತಿ ಕಲೆಹಾಕುತ್ತಿದೆ. ಅನೇಕ ನಿವೃತ್ತರನ್ನೂ ಕರೆಯಿಸಿ ವಿಚಾರಣೆಗೊಳಪಡಿಸುತ್ತಿದೆ. ಈ ಹಿಂದೆ ಕೇಂದ್ರ ಸರ್ಕಾರ ಹಿಂದಿ ಪ್ರಸಾರ ಮತ್ತು ಪ್ರಚಾರಕ್ಕಾಗಿ ಅನುದಾನ ನೀಡಿತ್ತು. ಅದನ್ನು ಮೂಲ ಉದ್ದೇಶಕ್ಕೆ ಬಳಸದೆ ದುರ್ಬಳಕೆ ಮಾಡಿಕೊಂಡಿದೆ ಎನ್ನಲಾಗಿದೆ. ಕೆಲ ಶಿಕ್ಷಕರು ಮತ್ತು ಸಿಬ್ಬಂದಿ ತಮ್ಮ ಸ್ವಂತ ಅಕೌಂಟ್‌ಗೆ ಹಣ ಹಾಕಿಕೊಂಡ ಬಗ್ಗೆ ದಾಖಲೆಗಳು ಸಿಕ್ಕಿವೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಹಿಂದಿ ಪ್ರಚಾರ ಸಭಾ ಅಧ್ಯಕ್ಷ ಈರೇಶ ಅಂಚಟಗೇರಿ, "ದಕ್ಚಿಣ ಭಾರತ ಸಭಾದಲ್ಲಿ ಕಳೆದ 2004 ರಿಂದ 2020ರವರೆಗೆ ಆಡಳಿತ ಮಂಡಳಿಯಲ್ಲಿ ನಡೆದ ಅವ್ಯವಹಾರದ ಕುರಿತು ತನಿಖೆ ನಡೆಯುತ್ತಿದೆ. ಸರ್ಕಾರದ ಸುಮಾರು 22 ಕೋಟಿಗೂ ಅಧಿಕ ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂಬ ಆರೋಪವಿದೆ. ಯಾವ ಉದ್ದೇಶಕ್ಕಾಗಿ ಹಿಂದಿ ಸಭಾ ಆರಂಭವಾಗಿದೆಯೋ ಆ ಉದ್ದೇಶಕ್ಕೆ ಬಳಸದೆ ಇನ್ನಿತರ ಚಟುವಟಿಕೆಗಳಿಗೆ ಬಳಸಿದ್ದಕ್ಕಾಗಿ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕೆಂದು ಭಾರತ ಸರ್ಕಾರ ತೀರ್ಮಾನ ಮಾಡಿ ಅದನ್ನು ಸಿಬಿಐಗೆ ವಹಿಸಿದೆ".
"ಸಿಬಿಐನ ಒಂದು ವಿಶೇಷ ತಂಡ ದಕ್ಷಿಣ ಭಾರತದ ಎಲ್ಲಾ ಕರ್ನಾಟಕ ಪ್ರಾಂತ್ಯದಲ್ಲಿರುವ ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿರುವ ದಾಖಲೆ ಹಾಗೂ ಲೆಕ್ಕಪತ್ರಗಳನ್ನು ಪರಿಶೀಲನೆ ಮಾಡುವ ಮೂಲಕ ಯಾವ ಅಧಿಕಾರಿಗಳು ಹಣವನ್ನು ತಮ್ಮ ಸ್ವಂತ ಖಾತೆಗೆ ಹಾಕಿದ್ದಾರೆ?. ಹಿಂದಿನ ಆಡಳಿತ ಮಡಳಿಯ ಸದಸ್ಯರು ಸಹ ಅದರಲ್ಲಿ ಭಾಗಿಯಾಗಿದ್ದಾರೆಯೇ? ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ".
"ಈ ನಿಟ್ಟಿನಲ್ಲಿ ಅವರು ತನಿಖೆ ಮುಂದುವರೆಸಿದ್ದಾರೆ. ಹಲವರಿಗೆ ನೊಟೀಸ್ ನೀಡಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ನಾವು ಅವರು ಕೇಳಿದ ದಾಖಲೆಯನ್ನು ಒದಗಿಸುತ್ತಿದ್ದೇವೆ. ಈಗಿರುವ ಅಥವಾ ಹಳೆಯ ಉದ್ಯೋಗಿಗಳಿರಬಹುದು, ಅಕೌಂಟೆಂಟ್ಗಳಿರಬಹುದು, ಪ್ರಾಂಶುಪಾಲರು ಅಥವಾ ಶಿಕ್ಷಕರಿಬಹುದು ಅವರಲ್ಲಿ ಕೆಲವು ಶಿಕ್ಷಕರು ಸರ್ಕಾರದಿಂದ ಬಂದ ಅನುದಾನವನ್ನು ತಮ್ಮ ಸ್ವಂತ ಅಕೌಂಟ್‌ಗೆ ಹಾಕಿಕೊಂಡಿದ್ದಾರೆ. ಹಿಂದಿನ ಕಾರ್ಯಾಧ್ಯಕ್ಷರ ಮೇಲೆ ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸಿಬಿಐ ತಂಡ ರಾಜ್ಯಕ್ಕೆ ಬಂದು ಏಳೆಂಟು ದಿನಗಳಾಗಿವೆ. ಮೊನ್ನೆ ಕೊಪ್ಪಳದ ಒಂದು ಕಾಲೇಜಿಗೆ ಭೇಟಿ ನೀಡಿದ್ದಾರೆ. ಮೈಸೂರಿನಲ್ಲಿರುವ ಕೆಲವು ಆಸ್ತಿಗಳನ್ನು ಮಾರಾಟ ಮಾಡಿದ್ದಾರೆ. ಆದರೆ ಆ ಹಣ ಅಕೌಂಟ್‌ಗೆ ಜಮಾ ಆಗಿಲ್ಲ. ಈ ರೀತಿಯ ಹಲವಾರು ಗಂಭಿರ ಆರೋಪಗಳು ಕೇಳಿ ಬಂದಿವೆ".
"ತನಿಖೆಯ ಬಳಿಕ ಸತ್ಯಾಂಶ ಹೊರ ಬೀಳಲಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಇದಲ್ಲದೆ ವಿದ್ಯಾರ್ಥಿಗಳು ಕಟ್ಟಿದ ಪ್ರವೇಶ ಶುಲ್ಕ ನೂರಾರು ಕೋಟಿ ಇದೆ. ಆ ಹಣ ಏನಾಗಿದೆ? ಎಂಬ ಬಗ್ಗೆ ಕೂಡ ಸ್ಫಷ್ಟತೆಯಿಲ್ಲ. ಆಡಿಟ್ ಮತ್ತು ಇಲ್ಲಿರುವ ಅಕೌಂಟ್ ಸ್ಟೇಟ್ ಮೆಂಟ್ ಯಾವುದಕ್ಕೂ ಹೊಂದಾಣಿಕೆಯಾಗುತ್ತಿಲ್ಲ. ಮೇಲ್ನೋಟಕ್ಕೆ ಅವ್ಯವಹಾರ ಕಂಡು ಬರುತ್ತಿದೆ. ಸಂಪೂರ್ಣ ತನಿಖೆ ಬಳಿಕವಷ್ಟೇ ಸತ್ಯಾಂಶ ಹೊರ ಬರಲಿದೆ" ಎಂದರು.
ಇದನ್ನೂ ಓದಿ: ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಹಿಂದಿನ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್