ಹುಬ್ಬಳ್ಳಿ: ಇಲ್ಲಿನ ಕೋಟಲಿಂಗನಗರದ ನಿಖಿಲ್ ಕುಂದಗೋಳ (28) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಶ್ವಾಪುರ ಠಾಣೆಯ ಇನ್ಸ್ಪೆಕ್ಟರ್, ಎಎಸ್ಐ ಸೇರಿ ಎಂಟು ಜನರ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕೇಶ್ವಾಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಯು.ಹೆಚ್. ಸಾತೇನಹಳ್ಳಿ, ಎಎಸ್ಐ ಜಯಶ್ರೀ ಛಲವಾದಿ, ಮೃತನ ಪತ್ನಿ ಪ್ರೀತಿ ಪೊಗಳಾಪುರ, ಧನರಾಜ್, ಮಂಜುಳಾ, ಆನಂದಪ್ಪ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ನಿಖಿಲ್ ಅವರ ತಾಯಿ ಗೀತಾ ಕುಂದಗೋಳ ದೂರು ನೀಡಿದ್ದಾರೆ.
ನಿಖಿಲ್ ಸಾವಿಗೆ ಅವರ ಪತ್ನಿ ಕುಟುಂಬದವರು ಹಾಗೂ ಕೇಶ್ವಾಪುರ ಠಾಣೆ ಇನ್ಸ್ಪೆಕ್ಟರ್ ಹಾಗೂ ಎಎಸ್ಐ ಕಾರಣ, ಗುರುವಾರ ತಡರಾತ್ರಿ ಮಗನಿಗೆ ನೋಟಿಸ್ ನೀಡಿ ದೌರ್ಜನ್ಯ ಎಸಗಿದ್ದರು. ಇದರಿಂದ ಮನನೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.
ಎಫ್ಐಆರ್ನಲ್ಲಿ ಏನಿದೆ?: ನಿಖಿಲ್ ಹಾಗೂ ಪ್ರೀತಿ ಕುಟುಂಬದವರ ಒಪ್ಪಿಗೆ ಮೇರೆಗೆ 2022 ರ ಡಿಸೆಂಬರ್ನಲ್ಲಿ ಇಬ್ಬರಿಗೆ ಮದುವೆ ಮಾಡಲಾಗಿತ್ತು. ಸ್ವಲ್ಪ ಸಮಯದ ನಂತರ ಯುವತಿಗೆ ಅನೈತಿಕ ಸಂಬಂಧ ಇದೆ ಎಂದು ನಿಖಿಲ್ ಹಾಗೂ ಆತನ ಮನೆಯವರು ಆರೋಪಿಸಿದ್ದರು. ಈ ಹಿನ್ನೆಲೆ ಎರಡೂ ಕುಟುಂಬಗಳ ನಡುವೆ ಮಾತಿಗೆ ಮಾತು ಕೂಡ ಬೆಳೆದಿತ್ತು. ಈ ಗಲಾಟೆ ನಂತರ ಶುಕ್ರವಾರ ನಿಖಿಲ್ನನ್ನು ಪೊಲೀಸ್ ಠಾಣೆಗೆ ಕರೆಸಿ ಮದುವೆ ಸಮಯದಲ್ಲಿ ನೀಡಿದ್ದ 2 ಲಕ್ಷ ರೂ. ನಗದು, ಪಾತ್ರೆ ಸಾಮಗ್ರಿ ಹಾಗೂ ಚಿನ್ನಾಭರಣವನ್ನು ನೀಡಬೇಕು. ಇಲ್ಲದಿದ್ದರೆ ವರದಕ್ಷಿಣೆ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮಿಷನರ್ ಪ್ರತಿಕ್ರಿಯೆ: ಯುವಕನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದು, ''ಈ ಕುರಿತಂತೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ನಮ್ಮ ಸಿಬ್ಬಂದಿ ಸೇರಿದಂತೆ ಎಂಟು ಜನರ ಮೇಲೆ ಕೇಸ್ ದಾಖಲಾಗಿದೆ. ಮೃತನ ಕುಟುಂಬದವರು ಪೊಲೀಸರ ನೋಟಿಸ್ ಕಿರುಕುಳ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹೀಗಾಗಿ ಪ್ರಕರಣ ತನಿಖಾ ಹಂತದಲ್ಲಿದೆ. ಎಲ್ಲಾ ಮೂಲಗಳಿಂದಲೂ ತನಿಖೆ ಕೈಗೊಳ್ಳಲಾಗುವುದು. ಆತ್ಮಹತ್ಯೆಗೆ ಕಿರುಕುಳ ಕಾರಣ ಎಂದು ತಿಳಿದು ಬಂದರೆ ಕ್ರಮ ಕೈಗೊಳ್ಳಲಾಗುವುದು'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೌಟುಂಬಿಕ ಕಲಹ: ಬೆಂಗಳೂರಲ್ಲಿ ಸಹೋದರ ಸಂಬಂಧಿಯನ್ನೇ ಕೊಲೆಗೈದ ಆರೋಪಿಗಳಿಬ್ಬರ ಬಂಧನ