ಹುಬ್ಬಳ್ಳಿ: ಸಾರ್ವಜನಿಕರಿಗೆ ಸಾರಿಗೆ ಬಸ್ಗಳಲ್ಲಿ ಮಿತವ್ಯಯಕರ ದರದಲ್ಲಿ ಶೀಘ್ರ, ಸುರಕ್ಷಿತ ಹಾಗೂ ಪಾರದರ್ಶಕ ಸರಕು ಸಾಗಣೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಗ್ರಾಹಕ ಸ್ನೇಹಿ ತಂತ್ರಾಂಶ ಆಧಾರಿತ ನಿರ್ವಹಣಾ ವ್ಯವಸ್ಥೆಯೊಂದಿಗೆ ಕಾರ್ಗೋ ಸೇವೆಯನ್ನು ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಆರಂಭಿಸಲಾಗಿದೆ.
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣ ಮತ್ತು ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ವಿಶೇಷ ಕಾರ್ಗೋ ಕೇಂದ್ರಗಳನ್ನು ತೆರೆಯಲಾಗಿದೆ. ಈ ಸೇವೆಯನ್ನು ಸಂಪೂರ್ಣವಾಗಿ ತಂತ್ರಾಂಶ ಆಧಾರಿತವಾಗಿ ನಿರ್ವಹಿಸಲಾಗುತ್ತದೆ. ಗ್ರಾಹಕರು ಆರಂಭಿಕ ಸ್ಥಳದಲ್ಲಿ ರವಾನೆಗಾಗಿ ನೀಡುವ ಸರಕನ್ನು ಆರಂಭಿಕ ಸ್ಥಳದಲ್ಲಿ ಸ್ವೀಕರಿಸಿದ ತಕ್ಷಣ ಕಳುಹಿಸುವವರ ಮೊಬೈಲ್ಗೆ ಎಸ್ಎಂಎಸ್ ಸಂದೇಶ ಬರುತ್ತದೆ. ಅದರ ಆಧಾರದಲ್ಲಿ ಗ್ರಾಹಕರು ವಿಳಾಸದಾರರಿಗೆ ವಿತರಣೆಯಾಗುವವರೆಗೆ ತಮ್ಮ ಪಾರ್ಸೆಲ್ ಮತ್ತು ಕೋರಿಯರ್ಗಳ ಸಾಗಣಿಕೆಯ ಪ್ರತಿ ಹಂತವನ್ನು ತಿಳಿದುಕೊಳ್ಳಬಹುದಾಗಿದೆ. ದೂರು ಮತ್ತು ಸಲಹೆಗಳಿಗಾಗಿ ಟೋಲ್ ಫ್ರೀ ಸಹಾಯವಾಣಿಗೆ ಸಂಪರ್ಕಿಸಬಹುದು.
ನೂತನ ವ್ಯವಸ್ಥೆಯಲ್ಲಿ ಸಾಗಾಣಿಕೆ ಮಾಡಬಹುದಾದ ಸರಕುಗಳನ್ನು ಕೋರಿಯರ್ ಸರಕುಗಳು, ಸಾಮಾನ್ಯ ಸರಕುಗಳು ಮತ್ತು ಹಾಳಾಗುವ ಸರಕುಗಳು ಎಂದು ಮೂರು ಪ್ರಕಾರಗಳಾಗಿ ವರ್ಗೀಕರಿಸಲಾಗಿದೆ. ಮೂರೂ ಪ್ರಕಾರದ ಸರಕುಗಳಿಗೆ ಪ್ರತ್ಯೇಕ ದರಪಟ್ಟಿ ನಿಗದಿಪಡಿಸಲಾಗಿದೆ. ಗ್ರಾಹಕರು ತಮ್ಮ ಬೆಲೆಬಾಳುವ ಸರಕುಗಳಿಗೆ ವಿಮೆ ಮಾಡಿಸಲು ಸಹ ಅವಕಾಶ ಕಲ್ಪಿಸಲಾಗಿದೆ.
ಮೊದಲ ಹಂತದಲ್ಲಿ ಹುಬ್ಬಳ್ಳಿಯಿಂದ ರಾಜ್ಯದ ಜಿಲ್ಲಾ ಕೇಂದ್ರಗಳು ಮತ್ತು ಪ್ರಮುಖ ತಾಲೂಕು ಕೇಂದ್ರಗಳು ಸೇರಿದಂತೆ ವಾ.ಕ.ರ. ಸಾ. ಸಂಸ್ಥೆಯ 26 ಸ್ಥಳಗಳಿಗೆ, ಕ.ರಾ.ರ.ಸಾ ನಿಗಮದ ವ್ಯಾಪ್ತಿಯ 35, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ 27 ಮತ್ತು ಅಂತಾರಾಜ್ಯಗಳಲ್ಲಿ 21 ಸ್ಥಳಗಳು ಸೇರಿದಂತೆ ಒಟ್ಟು 109 ಪ್ರಮುಖ ಸ್ಥಳಗಳಿಗೆ ಕಾರ್ಗೋ ಸೇವೆಯನ್ನು ಆರಂಭಿಸಲಾಗಿದೆ.
ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಥಳಗಳಿಗೆ ವಿಸ್ತರಿಸಲಾಗುವುದು ಎಂದು ವಾ.ಕ.ರ.ಸಾ.ಸಂಸ್ಥೆ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.