ಧಾರವಾಡ: ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಧಾರವಾಡಕ್ಕೆ ಭೇಟಿ ನೀಡಿದರು. ಧಾರವಾಡದ ಸಪ್ತಾಪೂರದಲ್ಲಿರುವ ಸ್ವಾಮಿ ವಿವೇಕಾನಂದ ಆಶ್ರಮ ಹಾಗೂ ಲಿಂಗಾಯತ ಭವನಕ್ಕೆ ಭೇಟಿ ನೀಡಿದ ವಿಜಯೇಂದ್ರ ಅವರನ್ನು ಆಶ್ರಮದ ವತಿಯಿಂದ ಹಾಗೂ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ದೊರೆಸ್ವಾಮಿ ಕುರಿತಂತೆ ಶಾಸಕ ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ದೊರೆಸ್ವಾಮಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು. ಯಾರೇ ಆಗಲಿ ಬೇರೆಯವರ ಮನಸ್ಸಿಗೆ ನೋವಾಗುವ ಸಂದರ್ಭ ಸೃಷ್ಟಿಸುವ ಮಾತುಗಳನ್ನು ಆಡಬಾರದು. ಸಾವರ್ಕರ್ ಬಗ್ಗೆ ಒಬ್ಬರು ಮಾತನಾಡುವುದು, ಅದನ್ನು ವಿರೋಧಿಸಿ ದೊರೆಸ್ವಾಮಿ ಬಗ್ಗೆ ಇನ್ನೊಬ್ಬರು ಮಾತನಾಡುವುದೂ ಎರಡೂ ಸರಿಯಲ್ಲ. ಸಾವರ್ಕರ್ ಬಗ್ಗೆ ಮಾತನಾಡುವುದು ಸಹ ಸಹಿಸಿಕೊಳ್ಳಲು ಆಗುವುದಿಲ್ಲ ಎಂದರು.
ಇನ್ನು ಶಾಸಕ ಮಹೇಶ ಕುಮಟಳ್ಳಿಗೆ ಸಚಿವ ಸ್ಥಾನದ ಸಿಗದೇ ಹೋದಲ್ಲಿ ರಾಜೀನಾಮೆ ಕೊಡುವೆ ಎಂದಿರುವ ರಮೇಶ ಜಾರಕಿಹೊಳಿ ಹೇಳಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸರ್ಕಾರದಲ್ಲಿ ಎಲ್ಲವೂ ಸುಶುತ್ರವಾಗಿದೆ. ಏನೂ ಆಗುವುದಿಲ್ಲ. ಇನ್ನು ನಾನು ಸರ್ಕಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ. ನಾನು ಪಕ್ಷದ ಪ್ರಧಾನ ಕಾರ್ಯದರ್ಶಿ ಆಗಿ ಕೆಲಸ ಮಾಡುತ್ತಿದ್ದೇನೆ. ಆಡಳಿತದಲ್ಲಿ ಮೂಗು ತೂರಿಸುವ ಕೆಲಸ ಮಾಡುವುದಿಲ್ಲ. ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.
ಇನ್ನು ಯಡಿಯೂರಪ್ಪನವರಿಗೆ ವಯಸ್ಸಾಗಿದೆ ನಾಯಕತ್ವ ಬೇಡ ಎಂದು ಹೈಕಮಾಂಡಗೆ ಅನಾಮಧೇಯ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಡಿಯೂರಪ್ಪನವರಿಗೂ ವಯಸ್ಸಿಗೂ ಸಂಬಂಧವೇ ಇಲ್ಲ. ಅವರು ಯುವಕರಂತೆಯೇ ಕೆಲಸ ಮಾಡುತ್ತಿದ್ದಾರೆ. ಉಪಚುನಾವಣೆಯಲ್ಲಿ ಅವರು ಹೇಗೆ ಕೆಲಸ ಮಾಡಿದ್ದಾರೆ ನೋಡಿದ್ದೀರಾ ಎಂದರು. ಇನ್ನು ಸರ್ಕಾರದ ಬಗ್ಗೆ ಸಿದ್ದರಾಮಯ್ಯ ಮೃದು ಧೋರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಧೋರಣೆ ಏನಿದ ಅನ್ನೋದು ಬರುವ ಅಧಿವೇಶನದಲ್ಲಿ ಗೊತ್ತಾಗುತ್ತೆ ಎಂದರು.