ಹುಬ್ಬಳ್ಳಿ: ನೆರೆ ಪೀಡಿತ ಜನರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸುತ್ತಿದೆ. ಹೆಚ್ಚಿನ ಅರ್ಥಿಕ ನೆರವು ಕೋರಲು ನಾಳೆ ದೆಹಲಿಗೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಿಯೋಗ ತೆರಳಲಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿಂದು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನಗೂ ಬರುವಂತೆ ಸಿಎಂ ಕರೆ ಮಾಡಿ ಹೇಳಿದ್ದಾರೆ.
ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು. ಕೇಂದ್ರ ಹೆಚ್ಚಿನ ನೆರವು ನೀಡುವ ವಿಶ್ವಾಸವಿದೆ ಎಂದರು.
ಸಂಪುಟ ರಚನೆ ಬಗ್ಗೆಯೂ ನಾಳೆ ತೀರ್ಮಾನ ತೆಗೆದುಕೊಳ್ಳುವ ಸಾದ್ಯತೆ ಇದೆ. ಅದಷ್ಟು ಬೇಗನೆ ಸಂಪುಟ ರಚನೆ ಮಾಡಲಾಗುವುದು ಎಂದರು. ಎಚ್.ಡಿ ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ಫೋನ್ ಕದ್ದಾಲಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದೊಂದು ಕಾನೂನು ಬಾಹಿರ ಕೃತ್ಯ. ದೇಶದ್ರೋಹಿಗಳು, ಸಮಾಜಘಾತುಕ ಶಕ್ತಿಗಳ ಫೋನ್ ಕದ್ದಾಲಿಕೆ ಮಾಡಲಾಗುತ್ತಿತ್ತು. ಆದ್ರೆ, ಕುಮಾರಸ್ವಾಮಿ ರಾಜಕೀಯ ವಿರೋಧಿಗಳ ಫೋನ್ ಕದ್ದಾಲಿಕೆ ಮಾಡಿಸಿದ್ದಾರೆ.
ಸಿದ್ದರಾಮಯ್ಯ ಅವರ ಫೋನ್ ಕದ್ದಾಲಿಕೆ ಮಾಡಲಾಗಿದೆ. ವಿರೋಧ ಪಕ್ಷದ ನಾಯಕರಾಗಿದ್ದಾಗ ನನ್ನ ಫೋನ್ ಕದ್ದಾಲಿಕೆ ಮಾಡಲಾಗಿತ್ತು. ಫೋನ್ ಕದ್ದಾಲಿಕೆಯಲ್ಲಿ ಭಾಗಿಯಾದ ಕುಮಾರಸ್ವಾಮಿ ಸೇರಿದಂತೆ ಇತರ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಶೆಟ್ಟರ್ ಆಗ್ರಹಿಸಿದರು.