ಧಾರವಾಡ : ವಿಧಾನಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆ, ಇಂದು ಸಂಜೆ ಧಾರವಾಡದ ನೌಕರರ ಭವನದಲ್ಲಿ ಬಿಜೆಪಿ ಪ್ರಚಾರ ಸಭೆ ನಡೆಯಿತು.
ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಚಿವ ಸಿ.ಟಿ ರವಿಗೆ ಧಾರವಾಡ ಜಿಲ್ಲಾ ಬಿಜೆಪಿ ಘಟಕದ ವರದಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಸಿ.ಟಿ ರವಿ, ಭಾರತೀಯ ಜನತಾ ಪಾರ್ಟಿ ಪ್ರತಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುತ್ತದೆ. ಇದು ಒಂದು ಯುದ್ಧ ಇದ್ದಂತೆ, ಯುದ್ಧದಲ್ಲಿ ಎದುರಾಳಿ ಸೋತರೆ ಮಾತ್ರ ಯುದ್ಧ ಗೆದ್ದಂತೆ. ಜನರಲ್ ಎಲೆಕ್ಷನ್ ಮಾಸ್ ಆದ್ರೆ, ಇದು ಕ್ಲಾಸ್ ಎಲೆಕ್ಷನ್ ಇದ್ದಂತೆ. ಇದು ಮೈಂಡ್ ಸೆಟ್ ಮಾಡುವ ಚುನಾವಣೆ. ಚುನಾವಣೆ ಅನ್ನೋದು ಜಾತ್ರೆಯಲ್ಲಿ ತೇರು ಎಳೆದಂತೆ. ಒಬ್ಬರು ಇಬ್ಬರು ಎಳೆದರೆ ಮುಂದಕ್ಕೆ ಹೋಗಲ್ಲ. ನಾವೆಲ್ಲರೂ ಕೂಡಿ ಎಳೆಯಬೇಕು ಎಂದರು.
ಒಂದೊಂದು ಮತಕ್ಕೂ ಬೆಲೆ ಇದೆ. ಬಿಜೆಪಿ ಅಲೆಯಲ್ಲಿ ಕಾಂಗ್ರೆಸ್ ಮತ್ತು ಜನತಾದಳ ಕೊಚ್ಚಿ ಹೋಗುತ್ತವೆ. ಜನತೆಯ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ಪಕ್ಷ ನಮ್ಮದು, ದಲ್ಲಾಳಿ ಪರವಾಗಿ ಕಾಂಗ್ರೆಸ್ ಆದ್ರೆ, ರೈತರ ಪರವಾಗಿ ಬಿಜೆಪಿ ಪಾರ್ಟಿಯಿದೆ. ಬಿಜೆಪಿ ಗೆಲುವು ಅಂದ್ರೆ, ಅದು ದೇಶದ ಗೆಲುವು ಇದ್ದಂತೆ ಎಂದು ಹೇಳಿದರು.