ಹುಬ್ಬಳ್ಳಿ: "ಇವತ್ತು ರಾತ್ರಿ ಅಥವಾ ನಾಳೆ ಬಿಜೆಪಿ ಪಟ್ಟಿ ಬಿಡುಗಡೆ ಆಗಬಹುದು. ಇಂದು ಸಂಜೆ ಪಾರ್ಲಿಮೆಂಟರಿ ಮೀಟಿಂಗ್ ಫಿಕ್ಸ್ ಆಗಿದೆ. ರಾತ್ರಿ ಮೊದಲ ಪಟ್ಟಿ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಇದೆ" ಎಂದು ಜಗದೀಶ್ ಶೆಟ್ಟರ್ ಹೇಳಿದರು.
ನಗರದದಲ್ಲಿಂದು ಬಿಜೆಪಿ ಮಾಧ್ಯಮ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, "ಕಳೆದ ಬಾರಿ ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ನಾವು ಲಿಸ್ಟ್ ಬಿಡುಗಡೆ ಮಾಡಿದ್ದೆವು. ಹೀಗಾಗಿ ವಿಳಂಬ ಎನ್ನುವ ಪ್ರಶ್ನೆ ಬರಲ್ಲ. ಕಾಂಗ್ರೆಸ್‌ನವರು ಒಂದು ತಿಂಗಳ ಮುಂಚೆ 224 ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಮಾಡ್ತೀವಿ ಎಂದು ಹೇಳಿದ್ದರು. ಜೆಡಿಎಸ್ ಇನ್ನೂ ಕೊನೇಯ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ಎಲ್ಲವೂ ಫೈನಲ್ ಆಗಿ, ಇಂದು ಮೊದಲನೇ ಪಟ್ಟಿ ಬಿಡುಗಡೆ ಆಗುವ ಭರವಸೆ ಇದೆ" ಎಂದರು.
ಹಾಲಿ ಶಾಸಕರಿಗೆ ಟಿಕೆಟ್ ತಪ್ಪುವ ವಿಚಾರಕ್ಕೆ ಪ್ರತಿಕ್ರಿಯಿಸಿ, "ಇದು ಪ್ರತಿ ಎಲೆಕ್ಷನ್‌ನಲ್ಲಿರುವ ಪ್ರೋಸೆಸ್. ಕೆಲವು ಕಡೆ ಶಾಸಕರಿಗೆ ವಿರೋಧಿ ಅಲೆ ಇರುತ್ತೆ, ಕೆಲವರಿಗೆ ಆರೋಗ್ಯ ಸಮಸ್ಯೆ ಇರುತ್ತೆ. ಹಾಗಾಗಿ ಟಿಕೆಟ್ ತಪ್ಪುವ ಚರ್ಚೆ ನಡೆಯುತ್ತಿರುತ್ತದೆ" ಎಂದು ಉತ್ತರಿಸಿದರು. ಧಾರವಾಡದಲ್ಲಿ ಯಾರಿಗಾದ್ರೂ ಟಿಕೆಟ್ ತಪ್ಪುತ್ತದೆಯೇ ಎಂಬ ಪ್ರಶ್ನೆಗೆ, "ಅದನ್ನು ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾನು ಈ ಬಾರಿ ಸ್ಪರ್ಧೆ ಮಾಡ್ತೀನಿ. ಪದೇ ಪದೇ ನಾನು ಅದಕ್ಕೆ ಉತ್ತರ ಕೊಡಲ್ಲ, ನಾನು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದು ಖಚಿತ" ಎಂದು ತಿಳಿಸಿದರು.
ಸುದೀಪ್ ವಿರುದ್ಧ ಕಾಂಗ್ರೆಸ್ ಪಿತೂರಿ- ಗೌರವ್ ಭಾಟಿಯಾ: "ನಟ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ ಎಂದು ಘೋಷಿಸಿದ ಕೂಡಲೇ ಕಾಂಗ್ರೆಸ್ ಪಕ್ಷದವರು ಅವರ ಹಿಂದೆ ಬಿದ್ದಿದ್ದಾರೆ. ತಳವರ್ಗದಿಂದ ಬಂದ ಸುದೀಪ್ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಅತೃಪ್ತಿ ಇದೆ. ಸುದೀಪ್ ಸ್ವಂತ ಶ್ರಮದಿಂದ ಮೇಲೆ ಬಂದಿದ್ದಾರೆ. ಅವರಿಗೆ ಯಾವ ಪಕ್ಷಕ್ಕೆ ಬೇಕಾದರೂ ಪ್ರಚಾರ ಮಾಡುವ ಸಂವಿಧಾನಿಕ ಹಕ್ಕಿದೆ. ಅದೇ ಹಕ್ಕಿನಿಂದ ಬಿಜೆಪಿ ಪರ ಪ್ರಚಾರ ಮಾಡ್ತೀನಿ ಎಂದು ಹೇಳಿದ್ದಾರೆ. ಆದರೆ ಕಾಂಗ್ರೆಸ್‌ನವರು ಅವರ ಜಾಹೀರಾತು ಮತ್ತು ಸಿನಿಮಾಗಳನ್ನು ಬ್ಯಾನ್ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರ ವರ್ತನೆ ಸರಿಯಲ್ಲ" ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವಾಗ್ದಾಳಿ ನಡೆಸಿದರು.
"ಡಬಲ್ ಎಂಜಿನ್ ಸರ್ಕಾರದ ಫಲವಾಗಿ ಕೇಂದ್ರ, ರಾಜ್ಯಗಳ ಅಭಿವೃದ್ಧಿಯಾಗುತ್ತಿದೆ. ಪ್ರಧಾನಿ ಮೋದಿ ಅವರು ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯ ಗುರಿ ಹೊಂದಿದ್ದಾರೆ. ಹೀಗಾಗಿ ಕರ್ನಾಟಕದ ಜನರಿಗೆ ಡಬಲ್ ಎಂಜಿನ್ ಸರ್ಕಾರದ ಮೇಲೆ ನಂಬಿಕೆ ಇದೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನವೇ ಸಿಎಂ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದೆ. ಬಿಜೆಪಿಯದ್ದು ಡಬಲ್ ಎಂಜಿನ್ ಸರ್ಕಾರ, ಕಾಂಗ್ರೆಸ್ ಟ್ರಬಲ್ ಎಂಜಿನ್ ಪಕ್ಷವಾಗಿದೆ" ಎಂದು ಭಾಟಿಯಾ ಲೇವಡಿ ಮಾಡಿದರು.
ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಚುನಾವಣೆಗೆ ಮುನ್ನ ಸಿಎಂ ಅಭ್ಯರ್ಥಿ ಘೋಷಿಸುವ ವಾಡಿಕೆ ಇಲ್ಲ: ಶಶಿ ತರೂರ್