ಹುಬ್ಬಳ್ಳಿ : ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಿಸುವ ಮುಂಚೆಯೇ ಅವರು ಆರೋಪಮುಕ್ತರಾಗಿ ಬರಲಿದ್ದಾರೆ ಎಂದು ಸರ್ಕಾರ ಹೇಳಿತ್ತು. ಹಾಗಾಗಿ, ಈಗ ಕ್ಲೀನ್ ಚಿಟ್ ನೀಡಿರುವುದರಲ್ಲಿ ಯಾವುದೇ ಆಶ್ಚರ್ಯ ಇಲ್ಲ ಎಂದು ಎಎಪಿ ರಾಜ್ಯ ಉಪಾಧ್ಯಕ್ಷ ಭಾಸ್ಕರ ರಾವ್ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಕಾರಣರಾದ ಸಚಿವರಿಗೆ ಕ್ಲೀನ್ ಚಿಟ್ ಕೊಡಲಾಗಿದೆ ಎಂದು ಅಸಮಾಧಾನ ಹೊರಹಾಕಿದರು. ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಮ ನಮಗೆ ಆದರ್ಶ ಎನ್ನುವ ಬಿಜೆಪಿಯನ್ನು ಸ್ವತಃ ರಾಮನೂ ಕ್ಷಮಿಸಲ್ಲ. ಸರ್ಕಾರದ ನೀತಿಗಳು ಸರಿಯಿಲ್ಲ ಎಂದು ಟೀಕಿಸಿದರು.
ಅಗತ್ಯ ವಸ್ತುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದು ಬಡವರ ಮೇಲೆ ಬರೆ ಹಾಕಲಾಗಿದೆ. ಕೊಟ್ಟ ಮಾತಿನಂತೆ ಕೇಂದ್ರ ಸರ್ಕಾರ ನಡೆದುಕೊಂಡಿಲ್ಲ. ಸಂಸದರ ಆದರ್ಶ ಗ್ರಾಮಗಳು ಸಹ ಅಭಿವೃದ್ಧಿ ಕಂಡಿಲ್ಲ. ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಅಭಿವೃದ್ಧಿಯ ದೂರದೃಷ್ಟಿಯೇ ಇಲ್ಲ. ಕೇವಲ ಕಮಿಷನ್ ರಾಜಕೀಯ ಮಾಡಿಕೊಂಡು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ ಎಂದು ಭಾಸ್ಕರ್ ರಾವ್ ಆರೋಪಿಸಿದರು.
ಓದಿ : ಸೋನಿಯಾ ಗಾಂಧಿ ಋಣ ತೀರಿಸಿಲ್ಲ ಎಂದರೆ, ತಿನ್ನುವ ಅನ್ನದಲ್ಲಿ ಹುಳ ಬೀಳುತ್ತೆ: ರಮೇಶ್ ಕುಮಾರ್