ಹುಬ್ಬಳ್ಳಿ: ತಮಗೆ ಔಷಧಿ ಪೂರೈಸಿದರೆ ಲಾಭ ಗಳಿಸಬಹುದೆಂದು ಹೇಳಿದ ಫೇಸ್ಬುಕ್ ಗೆಳತಿಯನ್ನು ನಂಬಿದ ಕಾಲೇಜು ಪ್ರಾಚಾರ್ಯರೊಬ್ಬರು ಬರೋಬ್ಬರಿ 34 ಲಕ್ಷ ರೂ. ಕಳೆದುಕೊಂಡು ಆಕಾಶ-ಭೂಮಿ ನೋಡುತ್ತಿದ್ದಾರೆ.
ಕೇಶ್ವಾಪುರ ಫಾತಿಮಾ ಡಿಗ್ರಿ ಕಾಲೇಜಿನ ಪ್ರಾಚಾರ್ಯರಾಗಿದ್ದ ಡಾ.ಬ್ರೋ ಹೆನ್ರಿ ಅಂಥೋನಿ ಸೆಕ್ವೇರಿಯಾ ಫೇಸ್‌ಬುಕ್‌ನಲ್ಲಿ ಮಹಿಳೆಯ ಗೆಳೆತನ ಮಾಡಿಕೊಂಡು ನಂತರ ಹಣಕಾಸಿನ ವ್ಯವಹಾರಕ್ಕೆ ಮುಂದಾಗಿ ಕಾಲೇಜಿನ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 34 ಲಕ್ಷ ರೂ. ವರ್ಗಾವಣೆ ಮಾಡಿ ಮೋಸ ಹೋಗಿದ್ದಾರೆ.
ವಿಷಯ ತಿಳಿದ ಬಳಿಕ ಡಾ. ಹೆನ್ರಿ ಅವರನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ಈ ಕುರಿತು ಹೆನ್ರಿ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಹೆನ್ರಿ ಅವರು ಕೇಶ್ವಾಪುರ ಫಾತಿಮಾ ಡಿಗ್ರಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕೆಲಸ ಮಾಡುತ್ತಿದ್ದರು. 2018ರಲ್ಲಿ ಫೇಸ್‌ಬುಕ್‌ನಲ್ಲಿ ಎನ್ಬೆಲ್ಲೆ ಮಾರ್ಕ್ ಎಂಬಾಕೆ ಪರಿಚಯವಾಗಿದ್ದರು. ತಾನು ಯುನೈಟೆಡ್ ಕಿಂಗಡಮ್‌ನ ಲೀವರ್‌ಪೂಲ್‌ನಲ್ಲಿರುವ ಪಿಲ್ಸಿಪ್ ಜೋಓ ಕೆಮಿಸ್ಟ್ರಿ ಹೆಲ್ತ್ ಕಂಪನಿಯಲ್ಲಿ ಖರೀದಿ ಮತ್ತು ಸಲಹೆಗಾರ್ತಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಕಂಪನಿಗೆ ಡಾ.ರೇಮಂಡ್ ಬೆನ್ಸನ್ ಎನ್ನುವವರು ನಿರ್ದೇಶಕರು ಎಂದು ತಿಳಿಸಿದ್ದರು. ತಮ್ಮ ಕಂಪನಿಗೆ ಭಾರತದ ಮುಂಬೈನಲ್ಲಿರುವ ಟ್ರೀಟ್ ಆ್ಯಂಡ್ ಕ್ಯೂರ್ ಇಂಡಿಯಾ ಎಂಬ ಕಂಪನಿಯಲ್ಲಿ ಲಕ್ಷ್ಮೀ ತಿವಾರಿ ಎಂಬುವವರು akeb4 ಎಂಬ ಕ್ಯಾನ್ಸರ್, ಡಯಾಬಿಟಿಕ್ ಮೆಂಟಲ್ ಡೀಸ್ಆರ್ಡರ್ ಔಷಧಿಯನ್ನು ಪೂರೈಕೆ ಮಾಡುತ್ತಿದ್ದಾರೆ. ಅವರಿಂದ ಔಷಧ ಖರೀದಿ ಮಾಡಿ ತಮ್ಮ ಕಂಪನಿಗೆ ಪೂರೈಸಿದರೆ ಲಾಭ ಗಳಿಸಿಬಹುದು ಎಂದು ಆಸೆ ಹುಟ್ಟಿಸಿದ್ದರು. ಇದನ್ನು ನಂಬಿದ ಡಾ. ಬ್ರೋ ಹೆನ್ರಿ ಸೆಕ್ವೇರಿಯಾ ಲಕ್ಷ್ಮೀ ತಿವಾರಿ ಎನ್ನುವವರನ್ನು ಸಂಪರ್ಕಿಸಿದ್ದಾರೆ. ಆಕೆ 1 ಲೀಟರ್ ಬಾಟಲ್ ಔಷಧಿಗೆ 1.50 ಲಕ್ಷ ರೂ. ಎಂದು ಹೇಳಿದ್ದಾರೆ. ಬಳಿಕ ಡಾ. ಹೆನ್ರಿ ಹುಬ್ಬಳ್ಳಿ ಕೇಶ್ವಾಪುರ ವಿಜಯ ಬ್ಯಾಂಕ್‌ನಲ್ಲಿಯ ತಾವು ಪ್ರಾಚಾರ್ಯರಾಗಿದ್ದ ಫಾತೀಮಾ ಕಾಲೇಜಿನ ಖಾತೆಯಿಂದ 3 ಲಕ್ಷ ರೂ. ಹಣವನ್ನು ಲಕ್ಷ್ಮೀ ಅವರ ಖಾತೆಗೆ ವರ್ಗಾವಣೆ ಮಾಡಿದ್ದಾರೆ.
ಲಕ್ಷ್ಮೀ ತಿವಾರಿ ಕೊರಿಯರ್ ಮೂಲಕ 2 ಔಷಧದ ಬಾಟಲ್‌ಗಳನ್ನು ಕಳಿಸಿದ್ದಾರೆ. ಇದನ್ನು ದೆಹಲಿ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿದಾಗ ಇವು ಗುಣಮಟ್ಟದಿಂದ ಕೂಡಿರುವುದು ತಿಳಿದುಬಂದಿದೆ. ಬಳಿಕ ಇಂತಹ 48 ಬಾಟಲ್‌ಗಳನ್ನು ಖರೀದಿಸಿ ಪೂರೈಸುವಂತೆ ಎನ್ಬೆಲ್ಲೆ ಮಾರ್ಕ್ ತಿಳಿಸಿದ್ದಾಳೆ. ಈ ಸಂಬಂಧ ಲಕ್ಷ್ಮೀ ತಿವಾರಿಗೆ ಡಾ. ಹೆನ್ರಿ ಸಂಪರ್ಕಿಸಿದ್ದು, ಒಟ್ಟಾರೆ ಮೊತ್ತ 75 ಲಕ್ಷ ರೂ. ಆಗುತ್ತದೆ. ಮುಂಗಡವಾಗಿ 37,50,000 ರೂ. ಭರಿಸಬೇಕೆಂದು ತಿಳಿಸಿದ್ದಾಳೆ. ಪುನಃ ಕಾಲೇಜಿನ ಖಾತೆಯಿಂದ ಲಕ್ಷ್ಮೀ ತಿವಾರಿ ಹೇಳಿದ ಬ್ಯಾಂಕ್ ಖಾತೆಗಳಿಗೆ ಒಟ್ಟು 31 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾರೆ. ಆದರೆ, ಪ್ರಾಚಾರ್ಯ ಡಾ. ಹೆನ್ರಿ ಔಷಧ ಪೂರೈಸಲು ಎನ್ಬೆಲ್ಲೆ ಮಾರ್ಕ್ಗೆ ಕರೆ ಮಾಡಿದಾಗ ಆಕೆ ಹಾಗೂ ಕಂಪನಿ ಸಿಬ್ಬಂದಿ, ಅಲ್ಲದೆ ಔಷಧ ಪೂರೈಸುತ್ತಿದ್ದ ಲಕ್ಷ್ಮೀ ತಿವಾರಿ ಕೂಡ ಸಂಪರ್ಕದಿಂದ ದೂರವಾಗಿದ್ದಾರೆ.