ಧಾರವಾಡ: ಮತಾಂತರ ತಡೆ ಕಾಯಿದೆ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲ ಕಾಯಿದೆಗಳು ನಮ್ಮಲ್ಲಿವೆ. ಆದರೆ, ಅವುಗಳನ್ನು ಜಾರಿಗೊಳಿಸುವುದು ತುಂಬಾ ಮುಖ್ಯ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪರಿಣಾಮಕಾರಿಯಾಗಿ ಈ ಕಾಯಿದೆಗಳು ಜಾರಿಗೆ ಬರುತ್ತವೆ. ಗೋ ಹತ್ಯೆ ಕಾಯಿದೆಯೂ ಇವತ್ತು ನಿನ್ನೆ ಬಂದಿದ್ದಲ್ಲ. 1965ರಲ್ಲಿಯೇ ಜಾರಿಗೆ ಬಂದಿದೆ. ಎಲ್ಲೆಲ್ಲಿ ಪ್ರಕರಣಗಳು ಕಂಡು ಬರುತ್ತದೆಯೋ ಅಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಹುಡುಕಿಕೊಂಡು ಹೋಗಿ ಇಂಥ ಪ್ರಕರಣಗಳನ್ನು ತಡೆಯಲು ಆಗುವುದಿಲ್ಲ. ಎಲ್ಲಿಯಾದರೂ ಅಕ್ರಮ ಗೋ ಸಾಗಾಟ ನಡೆದಿದ್ದರೆ, ಅಕ್ರಮ ಪ್ರಾಣಿ ವಧೆ ಕಂಡು ಬಂದಲ್ಲಿ ತಡೆಯುವ ಕೆಲಸವಾಗುತ್ತದೆ ಎಂದು ಹೇಳಿದರು.
ಇನ್ನು, ಎರಡು ಕ್ಷೇತ್ರಗಳ ಉಪಚುನಾವಣೆ ವಿಚಾರವಾಗಿ ಮಾತನಾಡುತ್ತಾ, ಸಂಜೆ ಸಭೆ ಕರೆದಿದ್ದೇವೆ. ಆಕಾಂಕ್ಷಿಗಳು ಅರ್ಜಿ ಕೊಡಬಹುದು. ಅದನ್ನು ಹೈಕಮಾಂಡ್ಗೆ ಕಳುಹಿಸುತ್ತೇವೆ. ಸೂಕ್ತ ವ್ಯಕ್ತಿಗೆ ಟಿಕೆಟ್ ಕೊಡುತ್ತೇವೆ ಎಂದರು.
ಹೆಬ್ಬಾಳ್ಕರ್ ಬಗ್ಗೆ ಸಂಜಯ ಪಾಟೀಲ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಓರ್ವ ಹೆಣ್ಣು ಮಗಳ ಬಗ್ಗೆ ಆ ರೀತಿ ಮಾತನಾಡಬಾರದು. ಆದರೆ, ಅವರು ಏನು ಹೇಳಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ನಿನ್ನೆ ಬೆಳಗಾವಿಯಲ್ಲಿದ್ದರೂ ಹಳ್ಳಿಗಳಲ್ಲಿದ್ದೆ. ಅವರು ಏನು ಹೇಳಿದ್ದಾರೋ ಅದಕ್ಕೆ ಅವರೇ ಉತ್ತರ ಕೊಡಲಿ. ಅವರ ಹೇಳಿಕೆ ಬಗ್ಗೆ ಗೊತ್ತಿಲ್ಲದೆ ಪ್ರತಿಕ್ರಿಯೆ ಕೊಡೋದು ಸರಿಯಲ್ಲ. ಯಾರೇ ಆದರೂ ಮಹಿಳೆಯರ ಬಗ್ಗೆ ಗೌರವ ಇಟ್ಟು ಮಾತನಾಡಬೇಕು ಎಂದು ಹೇಳಿದರು.
ಇದನ್ನೂ ಓದಿ: 31 ವರ್ಷದ ವ್ಯಕ್ತಿಗೆ 16 ಶಸ್ತ್ರಚಿಕಿತ್ಸೆ.. 17 ವರ್ಷದ ನಂತರ ನೇತಾಡುವ ಗಡ್ಡೆಗೆ ಸಿಕ್ತು ಮುಕ್ತಿ..