ಹುಬ್ಬಳ್ಳಿ: ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿತ್ತು. ಆದರೀಗ ಮೂರು ಪಕ್ಷಗಳ ಸಮ್ಮಿಶ್ರ ಸರ್ಕಾರವಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಲೇವಡಿ ಮಾಡಿದ್ದಾರೆ.
ನಗರದಲ್ಲಿಂದು ಮಾತನಾಡಿದ ಹೊರಟ್ಟಿ, ಸದ್ಯದ ರಾಜಕೀಯ ಪರಿಸ್ಥಿತಿ ಸರಿಯಾಗಿಲ್ಲ. ಕ್ಲಿಯರ್ ಮೆಜಾರಿಟಿ ಪಕ್ಷ ಅಧಿಕಾರ ನಡೆಸಬೇಕಿತ್ತು. ಆದರೆ ಪಕ್ಷಾಂತರ ಮಾಡಿ ಅಧಿಕಾರ ನಡೆಸುವುದು ಕಷ್ಟ. ಎಲ್ಲರನ್ನೂ ಸಮಾಧಾನ ಮಾಡುವುದೇ ಮುಖ್ಯಮಂತ್ರಿಗಳ ಕೆಲಸವಾಗಿದೆ. ರಾಜ್ಯ ಸರ್ಕಾರ ಸುಸೂತ್ರವಾಗಿ ಆಡಳಿತ ನಡೆಸಲು ಸಾಧ್ಯವಿಲ್ಲ ಎಂದರು.
ಪಕ್ಷಾಂತರ ಮಾಡಿ ಬಂದಿದ್ದಾರೆ, ಆದ್ರೆ ಸಾಮಾಜಿಕ ಕಳಕಳಿ ಇದ್ದವರು ಯಾರೂ ಇಲ್ಲ. ನನ್ನ ನಲವತ್ತು ವರ್ಷದ ಇತಿಹಾಸದಲ್ಲಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿದ್ದ ಮುಖ್ಯಮಂತ್ರಿಯನ್ನು ನಾನು ನೋಡಿಲ್ಲ ಎಂದರು.
ಅಷ್ಟೇ ಅಲ್ಲದೇ, ಮುಂದಿನ ದಿನಗಳಲ್ಲಿಯೂ ರೆಸಾರ್ಟ್ ರಾಜಕಾರಣ ಮುಂದುವರೆಯಲಿದ್ದು, ಹೀಗೆ ಮುಂದುವರಿದರೆ ರಾಜ್ಯಕ್ಕೆ ರಾಜಕೀಯ ಭವಿಷ್ಯವಿಲ್ಲವೆಂದು ಅಸಮಾಧಾನ ಹೊರಹಾಕಿದರು.