ಹುಬ್ಬಳ್ಳಿ : ರಾಜ್ಯದ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹುಬ್ಬಳ್ಳಿಯಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ಮುಂದಿನ ಮುಖ್ಯಮಂತ್ರಿ ಬೇರೆ ಆಗಬೇಕು ಅನ್ನೋ ಭಾವನೆಗಳು ಬಿಜೆಪಿಯಲ್ಲಿವೆ. ಆದರೆ, ನಾನು ಆ ರಾಜಕಾರಣಿ ಹೆಸರು ಹಾಗೂ ತೆರೆಮರೆಯಲ್ಲಿ ನಡೆಯುತ್ತಿರೋ ಘಟನೆಗಳ ಬಗ್ಗೆ ಸಂಪೂರ್ಣವಾಗಿ ಹೇಳಲ್ಲ. ಆದರೆ, ಬಿಜೆಪಿಯಲ್ಲಿ ಅಸಮಾಧಾನವಿದೆ. ಅಂತಹ ಬಿಜೆಪಿಯಲ್ಲಿ ಕೆಲ ಘಟನೆಗಳು ನಡೆದಿವೆ ಎನ್ನುವ ಮೂಲಕ ರಾಜ್ಯದ ಸಿಎಂ ಸ್ಥಾನ ಬದಲಾವಣೆ ವಿಚಾರವಾಗಿ ಹೊರಟ್ಟಿ ಹೊಸ ಬಾಂಬ್ ಸಿಡಿಸಿದ್ದಾರೆ.
ಅಷ್ಟೇ ಅಲ್ಲ, ಕುಮಾರಸ್ವಾಮಿ, ಯಡಿಯೂರಪ್ಪ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹೊರಟ್ಟಿ, ಯಡಿಯೂರಪ್ಪ, ಕುಮಾರಸ್ವಾಮಿ ಯಾವಾಗ ಲವ್ ಮಾಡುತ್ತಾರೋ, ಯಾವಾಗ ಭೇಟಿ ಆಗುತ್ತಾರೋ ಗೊತ್ತಾಗುವುದಿಲ್ಲ. ಶಾಸಕರ ಅನುದಾನ ವಿಚಾರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರನ್ನು ಕುಮಾರಸ್ವಾಮಿ ಭೇಟಿ ಮಾಡಿರಬಹುದು. ಮುಂದಿನ ರಾಜಕೀಯ ಬದಲಾವಣೆಗಾಗಿಯೂ ಭೇಟಿ ಮಾಡಿರಬಹುದೆಂದು ನಗೆ ಚಟಾಕಿ ಹಾರಿಸಿದರಲ್ಲದೇ, ಸದ್ಯದ ಪರಿಸ್ಥಿತಿ, ರಾಜ್ಯದ ಹಿತದೃಷ್ಠಿಯಿಂದ ಆಕಸ್ಮಿಕವಾಗಿ ಜೆಡಿಎಸ್ ಜೊತೆ ಸೇರಲೂಬಹುದು.
ಯಡಿಯೂರಪ್ಪ ಅವರು ಹೋರಾಟ ಮಾಡಿಕೊಂಡು ಬಂದವರು. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದವರು. ಇದು ಯಡಿಯೂರಪ್ಪ ಅವರ ಕೊನೆಯ ಅವಧಿ. ಇನ್ಮೇಲೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗೋದಿಲ್ಲ. ಅವರನ್ನು ಸಿಎಂ ಸ್ಥಾನದಿಂದ ಇಳಿಸುವುದು ಸರಿಯಲ್ಲ ಎಂದರು.