ಹುಬ್ಬಳ್ಳಿ: ಬಿಜೆಪಿಯ ಅನೇಕ ನಾಯಕರು ನಮ್ಮ ಪಕ್ಷ ಸೇರುವಂತೆ ನನ್ನನ್ನು ಒತ್ತಾಯಿಸಿದ್ದರು. ಜೊತೆಗೆ ಪಕ್ಷೇತರ ಚುನಾವಣೆ ಎದುರಿಸಬೇಕು ಅಂತಲೂ ಕೆಲವರು ಹೇಳಿದ್ದರು. ಆದರೆ, ಎಲ್ಲ ನಮ್ಮ ಮತದಾರರ ಒಪ್ಪಿಗೆ ಪಡೆದು ಇದೀಗ ಬಿಜೆಪಿಗೆ ಸೇರಿದ್ದೇನೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಇದನ್ನೂ ಓದಿ: ಪಠ್ಯಪುಸ್ತಕದಿಂದ ನಾರಾಯಣ ಗುರುಗಳ ಸಂದೇಶ ಕೈಬಿಡಲ್ಲ, ವದಂತಿಗೆ ಕಿವಿಗೊಡಬೇಡಿ: ಕೋಟ ಸ್ಪಷ್ಟನೆ
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸಭಾಪತಿಯಾಗಿ, ಶಾಸಕನಾಗಿ ಮುಂದುವರೆಯಬಹುದಿತ್ತು. ನಾನು ಈವರೆಗೆ ನೈತಿಕತೆ ಇಟ್ಟುಕೊಂಡು ಬಂದವನು. ಕರ್ನಾಟಕದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸಭಾಪತಿಯೊಬ್ಬ ರಾಜೀನಾಮೆ ನೀಡಿದ್ದಾರೆ. ಹಲವು ಪಕ್ಷಗಳಲ್ಲಿ ಕೆಲಸ ಮಾಡಿದ್ದೇನೆ. ರಾಮಕೃಷ್ಣ ಹೆಗಡೆ ಸಾಯುವವರೆಗೂ ಅವರ ಜತೆಗೆ ಇದ್ದೆ. ಹಲವು ರಾಜಕೀಯ ಮುಖಂಡರೊಂದಿಗೆ ಒಳ್ಳೆ ಒಡನಾಟ ಹೊಂದಿದ್ದೇನೆ. ಎಲ್ಲೇ ಇದ್ದರೂ ಕಳಂಕರಹಿತನಾಗಿ ಇರ್ತೆನೆ. ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಎಲ್ಲರ ನಾರ್ಗದರ್ಶನ ಪಡೆದು ಪಕ್ಷ ಸಂಘಟನೆ ಮಾಡುವೆ ಎಂದರು.
ಬಹಳ ಆತ್ಮೀಯತೆಯಿಂದ ಬಿಜೆಪಿಗರು ನನ್ನನ್ನು ಬರಮಾಡಿಕೊಂಡಿದ್ದಾರೆ. 23, 24ರಂದು ಕುಟುಂಬ ಸಮೇತ ನಾಮಪತ್ರ ಸಲ್ಲಿಸುತ್ತೇನೆ. 26 ರಂದು ಬಿಜೆಪಿ ಮುಖಂಡರ ಜತೆ ಸಾರ್ವಜನಿಕರ ಜತೆ ಸೇರಿ ನಾಮಪತ್ರ ಸಲ್ಲಿಸುತ್ತೇನೆ. ಬದಲಾವಣೆ ಜಗದ ನಿಯಮ. ನಮ್ಮ ಮತದಾರರ ಭಾವನೆಗಳಿಗೆ ತಕ್ಕನಾಗಿ ನಡೆದುಕೊಂಡಿದ್ದೇನೆ. ಜೆಡಿಎಸ್ ಬಿಡಲು ನಿರ್ದಿಷ್ಟ ಕಾರಣ ಇಲ್ಲ. ಬಿಜೆಪಿಯಿಂದ ಸ್ಪರ್ಧೆ ಮಾಡಬೇಕು ಅಂತ ಒತ್ತಾಯ ಇತ್ತು. ಪಕ್ಷಕ್ಕಿಂತ ಶಿಕ್ಷಕರ ಜತೆ ವೈಯಕ್ತಿಕ ಸಂಬಂಧ ಚನ್ನಾಗಿದೆ. ಅವರು ನನ್ನ ಕೈಬಿಡಲ್ಲ. ಜೆಡಿಎಸ್ ನನ್ನನ್ನ ಬೆಳೆಸಿದೆ. ಆ ಬಗ್ಗೆ ಟೀಕೆ ಮಾಡೋದಿಲ್ಲ ಎಂದರು.
ನಮ್ಮ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ: ಬಸವರಾಜ್ ಹೊರಟ್ಟಿ ಬಿಜೆಪಿ ಸೇರ್ಪಡೆ ಆಗಿದ್ದರಿಂದ ನಮ್ಮ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಜನತಾ ಪರಿವಾರದ ಸಾಕಷ್ಟು ಜನ ಈ ಹಿಂದೆ ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇದೇ ವೇಳೆ ಹೇಳಿದರು.
2008 ರಲ್ಲಿ ನಮ್ಮ ಪಕ್ಷಕ್ಕೆ ಬರುವಂತೆ ಅವರನ್ನು ಯಡಿಯೂರಪ್ಪ ಆಹ್ವಾನ ಮಾಡಿದ್ದರು. ಆದರೆ ಜೆಡಿಎಸ್ ಜತೆಗೆ ಒಳ್ಳೆಯ ಸಂಬಂಧ ಇರುವುದರಿಂದ ಆವಾಗ ಬರಲಿಲ್ಲ. ಆದರೂ ಆವಾಗ ನಮ್ಮ ಜೊತೆಗೆ ಒಳ್ಳೆಯ ಸಂಬಂಧವನ್ನ ಇಟ್ಟುಕೊಂಡಿದ್ದರು. ಹುಬ್ಬಳ್ಳಿ- ಧಾರವಾಡ ಅಭಿವೃದ್ಧಿ ವಿಚಾರವಾಗಿ ಪಕ್ಷಭೇದ ಮರೆತು ನಮಗೆ ಬೆಂಬಲ ನೀಡಿದ್ದರು. ಹೊರಟ್ಟಿಯವರು ತಮ್ಮದೇ ಆದ ಅಭಿಮಾನಿಗಳನ್ನ ಹೊಂದಿದ್ದಾರೆ. ಈಗ ನಮ್ಮ ಪಕ್ಷಕ್ಕೆ ಬಂದಿದ್ದರಿಂದ ನಮಗೆ ಶಕ್ತಿ ಬಂದಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ : ನೂತನ ಗ್ರಾಪಂ ಕಟ್ಟಡಕ್ಕೆ ಬೀಗ ಹಾಕಿಸಿದ ಹೈಕೋರ್ಟ್.. ಕಾರಣ ಏನಂದ್ರೆ..
ಮೊದಲ ಬಾರಿಗೆ ಬಿಜೆಪಿ ಕಚೇರಿಗೆ ಆಗಮಿಸಿದ ಹೊರಟ್ಟಿ: ಬಿಜೆಪಿಗೆ ಸೇರ್ಪಡೆಯಾದ ಬಸವರಾಜ ಹೊರಟ್ಟಿ ಇದೇ ಮೊಟ್ಟ ಮೊದಲ ಬಾರಿಗೆ ದೇಶಪಾಂಡೆ ನಗರಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದರು. ಕಳೆದೆರಡು ದಿನಗಳ ಹಿಂದೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಅವರನ್ನ ಜಗದೀಶ್ ಶೆಟ್ಟರ್ ಸೇರಿದಂತೆ ಪಕ್ಷದ ಮುಖಂಡರು ಆತ್ಮೀಯವಾಗಿ ಬರ ಮಾಡಿಕೊಂಡರು.