ಹುಬ್ಬಳ್ಳಿ: ಅಂಗನವಾಡಿ ಕೆಲಸದಿಂದ ನಿವೃತ್ತಿಯಾಗಿರುವ ಮುಂದಿನ ದಿನಗಳಲ್ಲಿ ನಿವೃತ್ತಿ ಆಗಲಿರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಪಿಂಚಣಿ ಸೌಲಭ್ಯ, ಸೇವಾ ಹಿರಿತನದ ಆಧಾರದ ಗೌರವಧನ ನಿಗದಿ ಮಾಡುವಂತೆ ಆಗ್ರಹಿಸಿ ಡಿ.26, 27 ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಎಐಟಿಯುಸಿಯ ಧಾರವಾಡ ಜಿಲ್ಲಾ ಸಮಿತಿಯ ಜಿಲ್ಲಾ ಕಾರ್ಯದರ್ಶಿ ವೀರಮ್ಮ ಸವಡಿ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರ ಮುಂದೆ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ರಾಜ್ಯದಲ್ಲಿ ಜಾರಿಗೆ ಬಂದು 44 ವರ್ಷಗಳು ಕಳೆಯುತ್ತ ಬಂದಿದೆ. ಆದರೆ, ಫಲಾನುಭವಿ ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳು ಅಪೌಷ್ಟಿಕತೆ, ರಕ್ತಹೀನತೆ, ಪ್ರಸವಪೂರ್ವ ಸಮಸ್ಯೆ ಸೇರಿ ಮರಣಗಳು ಸಂಭವಿಸುತ್ತಲೇ ಇವೆ. ಪ್ರಸ್ತುತ ವರದಿಯಂತೆ ರಾಜ್ಯದಲ್ಲಿ ಶೇ.60.9 ರಷ್ಟು ಮಕ್ಕಳು, ಶೇ.42.4 ರಷ್ಟು ಮಹಿಳೆಯರು, ಶೇ.18.2 ರಷ್ಟು ಪುರುಷರಲ್ಲಿ ರಕ್ತ ಹೀನತೆ ಸಮಸ್ಯೆ ಎದುರಿಸುತ್ತಿದ್ದಾರೆ. ಕೂಡಲೇ ಯೋಜನೆಯನ್ನು ಸರ್ಕಾರ ಯಶಸ್ವಿಯಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಜೊತೆಗೆ ಯೋಜನೆಯಲ್ಲಿ ದುಡಿಯುತ್ತಿರುವ 1.3 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕಳೆದ ನಾಲ್ಕು ದಶಕಗಳಿಂದಲೂ ಕನಿಷ್ಠ ವೇತನ ಇಲ್ಲದೇ ಕನಿಷ್ಠ ಗೌರವಧನ ಪಡೆದುಕೊಂಡು ಬಂದಿದ್ದಾರೆ. ಯಾವುದೇ ಕೆಲಸದ ಭದ್ರತೆ, ಸಾಮಾಜಿಕ ಭದ್ರತೆ ಸೌಲಭ್ಯಗಳಾದ ಪಿಂಚಣಿ, ಇ.ಎಸ್.ಐ ಭವಿಷ್ಯ ನಿಧಿಗಳಿಂದ ವಂಚಿತರಾಗಿದ್ದು, ಕೂಡಲೇ ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ 2 ದಿನಗಳ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ.
ಅಂದು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಸುಮಾರು ಎಲ್ಲ ಜಿಲ್ಲೆಗಳಿಂದ 60 ರಿಂದ 70 ಸಾವಿರ ಅಂಗನವಾಡಿ ಕಾರ್ಯಕರ್ತರು 2 ದಿನಗಳ ಕಾಲ ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ನಡೆಸಿ ನಮ್ಮ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಗುವುದು ಎಂದರು.