ಹುಬ್ಬಳ್ಳಿ: ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಡಿ 9ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಬೇಕಿದ್ದ ಬೃಹತ್ ಕಟ್ಟಡ, ಅನುದಾನದ ಕೊರತೆಯಿಂದಾಗಿ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ.
ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಸರ್ಕಾರದ ನಿರ್ಲಕ್ಷ್ಯತನದಿಂದ ಐದು ವರ್ಷದಿಂದ ಕಟ್ಟಡದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿ ಡಾ.ಬಾಬು ಜಗಜೀವನರಾಮ್ ಸಮುದಾಯ ಭವನ ಬಿಡುಗಡೆಯಾಗಿತ್ತು.
ಹುಬ್ಬಳ್ಳಿಯ ಪಡದಯ್ಯನ ಹಕ್ಕಲದಲ್ಲಿ ಅಂದಿನ ಸಮಾಜ ಕಲ್ಯಾಣ ಇಲಾಖೆಯ ಸಚಿವ ಹೆಚ್.ಆಂಜನೇಯ ಭೂಮಿ ಪೂಜೆ ಮಾಡಿ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೇ ಸರ್ಕಾರದಿಂದ ಕಟ್ಟಡದ ಕಾಮಗಾರಿ ಮಾಡಿದ ಗುತ್ತಿಗೆದಾರನಿಗೆ ಹಣ ಬಿಡುಗಡೆಯಾಗಿರಲಿಲ್ಲ. ಅದೇ ಕಾರಣಕ್ಕೆ ಗುತ್ತಿಗೆದಾರ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದರು.
ಈ ಸಂಬಂಧ ಸ್ಥಳೀಯ ಶಾಸಕ ಪ್ರಸಾದ ಅಬ್ಬಯ್ಯ ಸರ್ಕಾರದ ಗಮನಕ್ಕೆ ತಂದರೂ ಕೂಡ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಕ್ಯಾರೇ ಅಂದಿಲ್ಲ. ಕಳೆದ ಜನವರಿಯಲ್ಲಿಯೇ ಕೆಲಸ ಪ್ರಾರಂಭಿಸಲು ಗುತ್ತಿಗೆದಾರನಿಗೆ ಸಮಾಜ ಕಲ್ಯಾಣ ಇಲಾಖೆ ಖಡಕ್ ಆದೇಶ ಮಾಡಿದೆ. ಆದರೂ ಗುತ್ತಿಗೆದಾರ ಇತ್ತ ತಿರುಗಿ ನೋಡಿಲ್ಲ. ಕೆಲಸವನ್ನು ಕೂಡ ಆರಂಭಿಸಿಲ್ಲ.
ಇದೇ ಕಾರಣಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಎರಡು ತಿಂಗಳ ಒಳಗಾಗಿಯೇ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಿದ್ದಾರೆ. ಒಂದು ವೇಳೆ ಕಾಮಗಾರಿ ಆರಂಭಿಸದೇ ಹೋದರೇ ಗುತ್ತಿಗೆದಾರನ ಕಪ್ಪು ಪಟ್ಟೆಗೆ ಸೇರಿಸಿ ಹೊಸದಾಗಿ ಟೆಂಡರ್ ಕರೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಸುಪ್ರೀಂ ಆದೇಶವನ್ನು ಕೇಂದ್ರ ಒಪ್ಪಿದ್ರೆ, ರಾಜ್ಯ ಸರ್ಕಾರದ ಉಚಿತ ಯೋಜನೆಗಳು ರದ್ದಾಗುತ್ತವೆ: ಉಮೇಶ್ ಕತ್ತಿ