ಧಾರವಾಡ: ಈ ಬಾರಿ ಸುರಿದ ಜೋರು ಮಳೆಯಿಂದಾಗಿ ಜಿಲ್ಲೆಯಾದ್ಯಂತ 89 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 61 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಹೆಸರು ಬೆಳೆ ನಾಶವಾಗಿದೆ. ನೀರಾವರಿ ಪ್ರದೇಶದಲ್ಲೂ ಬೆಳೆ ನಾಶವಾಗಿದೆ. ಈಗಾಗಲೇ ಸಮೀಕ್ಷೆ ಕೂಡ ಮಾಡಿಸಿದ್ದೇವೆ. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್‌ನಿಂದ ಪರಿಹಾರ ಕೊಡಲಾರಂಭಿಸಿದ್ದೇವೆ. ಪ್ರಸಕ್ತ ವರ್ಷ ಒಣ ಬೇಸಾಯದಲ್ಲಿನ ಹಾನಿಗೀಡಾದ ಪ್ರತಿ ಎಕರೆ ಬೆಳೆಗೆ 13,600 ರೂ ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿದರು.
ನೀರಾವರಿ ಪ್ರದೇಶದಲ್ಲಿನ ಹಾನಿಗೀಡಾದ ಬೆಳೆಗೆ 25 ಸಾವಿರ ರೂ ಪರಿಹಾರ ನೀಡಲಾಗುತ್ತಿದೆ. ನಮ್ಮ ಸರ್ಕಾರ ಹೆಚ್ಚಿನ ಪರಿಹಾರ ನೀಡುತ್ತಿದೆ. ಕಳೆದ ವರ್ಷ 18 ಲಕ್ಷ ರೈತರಿಗೆ 2250 ಕೋಟಿ ರೂ ಪರಿಹಾರ ನೀಡಿದ್ದೇವೆ. ಜಿಲ್ಲೆಯ ಅನೇಕ ಕಡೆಗಳಲ್ಲಿ ಹೆಸರು ಬೆಳೆ ಸಂಪೂರ್ಣ ನಾಶವಾಗಿದೆ. ಅದನ್ನು ಕಟಾವು ಮಾಡಲು ಆಗುತ್ತಿಲ್ಲ. ಈ ಸಂಬಂಧ ವಿಮಾ ಕಂಪನಿಯವರೊಂದಿಗೂ ಸಭೆ ಮಾಡಲಾಗಿದೆ ಎಂದರು.
ಧಾರವಾಡ ಜಿಲ್ಲೆಯಲ್ಲಿ 34 ಸಾವಿರ ಲೀಟರ್ ನ್ಯಾನೋ ಯೂರಿಯಾ ಬಳಕೆ ಮಾಡಲಾಗಿದ್ದು, ಇದರಿಂದ ಭೂಮಿ ಕೂಡ ಫಲವತ್ತತೆ ಕಾಯ್ದುಕೊಳ್ಳುತ್ತದೆ. ನ್ಯಾನೋ ಯೂರಿಯಾ ಬಳಕೆ ಮಾಡುವುದರಲ್ಲಿ ಧಾರವಾಡ ಜಿಲ್ಲೆ ಮುಂದಿದೆ ಎಂದು ಸಚಿವರು ಹೇಳಿದರು.
ಇದೇ ವೇಳೆ, ಹಾಳಾದ ಹೊಲದ ರಸ್ತೆ ನಿರ್ಮಾಣ ಮಾಡಲು ಸೂಚನೆ ನೀಡಲಾಗಿದ್ದು, ಪ್ರತಿ ಕಿಲೋ ಮೀಟರ್ ರಸ್ತೆ ನಿರ್ಮಾಣಕ್ಕೆ 65 ಸಾವಿರ ಅನುದಾನ ನೀಡಲಾಗುತ್ತಿದೆ ಎಂದರು. ಇನ್ನು, ಸದ್ಯಕ್ಕೆ ರೈತರ ಸಾಲ ಮನ್ನಾ ವಿಚಾರ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ರೈತರು ಸಾಲ ಮಾಡಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ 6 ಸಾವಿರ ಹಾಗೂ ರಾಜ್ಯ ಸರ್ಕಾರದಿಂದ 4 ಸಾವಿರ ಸೇರಿದಂತೆ ಒಟ್ಟು 10 ಸಾವಿರ ಕಿಸಾನ್ ಸಮ್ಮಾನ್ ಹಣ ನೀಡಲಾಗುತ್ತಿದೆ. ರಾಜ್ಯದ 53 ಲಕ್ಷ ರೈತರಿಗೆ ಕಂತು ರೀತಿಯಲ್ಲಿ ಅವರ ಅಕೌಂಟ್‌ಗೆ ಹಣ ಸಂದಾಯ ಮಾಡಲಾಗುತ್ತಿದೆ ಎಂದರು. ಧಾರವಾಡ ಕೃಷಿ ವಿವಿಗೆ ನೂತನ ಕುಲಪತಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಈ ಸಂಬಂಧ ಸರ್ಚ್ ಕಮಿಟಿ ಆಗಿದೆ. ಸದ್ಯದಲ್ಲೇ ಐಸಿಆರ್‌ನಿಂದ ನಿರ್ದೇಶನ ಬಂದ ಮೇಲೆ ಕೃಷಿ ವಿವಿಗೆ ನೂತನ ಕುಲಪತಿ ನೇಮಕ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಮಳೆಗೆ ಬಿದ್ದ ಮನೆ, ಶೌಚಾಲಯದಲ್ಲೇ ಮಹಿಳೆಯ ವಾಸ: ಸ್ಥಳಕ್ಕೆ ತಹಶೀಲ್ದಾರ್ ಭೇಟಿ