ಧಾರವಾಡ: ಸಂಸತ್ ಭವನದ ಮೇಲಿನ ದಾಳಿ ವಿಚಾರದಲ್ಲಿ ಕಾಂಗ್ರೆಸ್ ಕುತಂತ್ರವಿದೆ ಎಂಬ ಆರೋಪಗಳಿಗೆ ಸಚಿವ ಜಮೀರ್ ಅಹ್ಮದ್ ತಿರುಗೇಟು ನೀಡಿದರು. ಇದರಲ್ಲಿ ಕಾಂಗ್ರೆಸ್ ಕುತಂತ್ರ ಹೇಗಿರುತ್ತೆ? ಅವರಿಗೆ ಪಾಸ್ ಕೊಟ್ಟವರು ಯಾರು? ಇದರಲ್ಲಿ ರಾಜಕೀಯ ಮಾತನಾಡಲು ನಾನು ಇಷ್ಟಪಡುವುದಿಲ್ಲ. ಇದರಲ್ಲಿ ಭದ್ರತಾ ವೈಫಲ್ಯವಾಗಿದೆ ಎಂದು ದೂರಿದರು.
ಧಾರವಾಡದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅವರು ಪ್ರೇಕ್ಷಕರ ಗ್ಯಾಲರಿ ಮೇಲಿಂದ ಜಂಪ್ ಹೊಡೆದಿದ್ದಾರೆ. ಹೀಗಾದರೆ ಅಲ್ಲಿ ಸೆಕ್ಯೂರಿಟಿ ವ್ಯವಸ್ಥೆ ಹೇಗಿದೆ? ಸಂಸತ್‌ನಲ್ಲಿ ಒಳಗೆ ಹೋಗಲು ಹತ್ತಾರು ಪ್ರಕ್ರಿಯೆಗಳಿವೆ. ಮಂತ್ರಿ, ಎಂಎಲ್‌ಗಳೂ ಸಂಸತ್‌ಗೆ ಹೋಗಲು ಅನೇಕ ಪ್ರಕ್ರಿಯೆಗಳಿವೆ. ಹಾಗಾದರೆ ಆ ಹುಡುಗ ಹೇಗೆ ಒಳ ಹೋದ?, ಸಿಎಂ ಕೂಡಾ ಪ್ರಧಾನಿಯನ್ನು ಭೇಟಿಯಾಗಬೇಕಾದರೂ ಅನೇಕ ಪ್ರಕ್ರಿಯೆಗಳಿವೆ. ನಾನು ಸಚಿವನಾಗಿ ನನಗಿನ್ನೂ ಲೋಕಸಭೆಗೆ ಹೋಗಲಾಗಿಲ್ಲ. ಹಾಗಾದರೆ ಆತ ಹೇಗೆ ಹೋದ ಎಂದು ಅವರು ಪ್ರಶ್ನಿಸಿದರು.
ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವ ವಿಚಾರ: ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪ್ರಸಾದ ಅಬ್ಬಯ್ಯ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅದರಲ್ಲಿ ತಪ್ಪೇನಿದೆ?. ಅಬ್ಬಯ್ಯ ಅವರು ಟಿಪ್ಪು ಸುಲ್ತಾನ್ ಮೇಲಿನ ಅಭಿಮಾನದಿಂದ ಹೇಳಿದ್ದಾರೆ ಎಂದರು.
ಲೋಕಸಭೆ- 25 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತೆ: ಲೋಕಸಭೆ ಚುನಾವಣೆಗೆ ಮೂರು ಕ್ಷೇತ್ರಗಳಲ್ಲಿ ನಮ್ಮವರಿಗೆ ಟಿಕೆಟ್ ಕೇಳಿದ್ದೇನೆ. ಎಲ್ಲ ಕ್ಷೇತ್ರಗಳಲ್ಲಿ ಲೋಕಸಭೆಗೆ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಮೂರು ಕ್ಷೇತ್ರದಲ್ಲಿ ಮುಸ್ಲಿಮರಿಗೆ ಟಿಕೆಟ್ ಕೇಳಿದ್ದೇವೆ. ಬೆಂಗಳೂರು ಸೆಂಟ್ರಲ್, ಹಾವೇರಿ, ಬೀದರ್ ಕ್ಷೇತ್ರದ ಟಿಕೆಟ್ ಕೇಳಿದ್ದೇವೆ. ರಾಜ್ಯದ ಜನ ಬದಲಾವಣೆ ಬಯಸಿದ್ದಾರೆ. ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಜನ ಈಗ ತೀರ್ಮಾನ ತೆಗೆದುಕೊಂಡಾಗಿದೆ. ರಾಜ್ಯದಲ್ಲಿ ಕನಿಷ್ಠ 25 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದರು.
ಜೆಡಿಎಸ್ ಕೋಮುವಾದಿ: ಮುತಾಲಿಕ್ ಜೊತೆ ಎಚ್‌ಡಿಕೆ ವೇದಿಕೆ ಹಂಚಿಕೊಳ್ಳುತ್ತಿರುವ ವಿಚಾರಕ್ಕೆ ಮಾತನಾಡಿದ ಅವರು, ಜೆಡಿಎಸ್ ಈಗ ಜೆಡಿಕೆ ಆಗಿದೆ. ಸೆಕ್ಯೂಲರ್ ಪಕ್ಷ ಅಲ್ಲ, ಅದು ಈಗ ಕೋಮುವಾದಿ ಪಕ್ಷ ಎಂದು ಜಮೀರ್ ಅಹ್ಮದ್ ಲೇವಡಿ ಮಾಡಿದರು.
ಜನತಾ ದಳ ಈಗ ಜಾತ್ಯಾತೀತ ಆಗಿ ಉಳಿದಿಲ್ಲ, ಬಿಜೆಪಿ ಜೊತೆ ಕೈ ಜೋಡಿಸಿದ ಮೇಲೆ ಅದು ಹೋಯ್ತು ಜೆಡಿಎಸ್ ಅಂತಾ ಇರುವುದರಲ್ಲಿ ಎಸ್ ತೆಗೆಯಬೇಕು. ಜೆಡಿಕೆ ಮಾಡಲಿ, ಕೆ ಅಂದ್ರೆ ಕೋಮುವಾದಿ ಆದರೂ ಆಗಬಹುದು. ಕುಮಾರಸ್ವಾಮಿ ಅಂತಾದ್ರೂ ಆಗಬಹುದು ಎಂದು ಕುಟುಕಿದರು.
ನಾನು ಸಿದ್ಧರಾಮಯ್ಯ ಪರ-ಸಚಿವ ಜಮೀರ್: ನಾನು ಯಾವತ್ತೂ ಸಿದ್ಧರಾಮಯ್ಯನವರ ಪರವಾಗಿದ್ದೇನೆ. ಸದ್ಯಕ್ಕೆ ಸಿದ್ದರಾಮಯ್ಯನವರೇ ಸಿಎಂ ಆಗಿದ್ದಾರೆ. ಅವರೇ ಇರುತ್ತಾರೆ ಎಂದು ಜಮೀರ್ ಹೇಳಿದರು. ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಪವರ್ ಶೇರಿಂಗ್ ಚರ್ಚೆ ಬಗ್ಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ ಜಮೀರ್, ಸಿಎಂ ಸಿದ್ಧರಾಮಯ್ಯ ಐದು ವರ್ಷ ಪೂರ್ಣಗೊಳಿಸುತ್ತಾರೆಂಬ ವಿಚಾರಕ್ಕೆ ಸ್ಪಷ್ಟ ಪ್ರತಿಕ್ರಿಯೆ ನೀಡಿದರು. ಎರಡೂವರೆ ವರ್ಷದ ನಂತರ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರಾ ಅಂದ್ರೆ ಉತ್ತರ ನೀಡದ ಜಮೀರ್ ಅಹ್ಮದ್, ಸದ್ಯಕ್ಕೆ ಖುರ್ಚಿ ಖಾಲಿ ಇಲ್ಲಾ ಎಂಬ ಮಾತನ್ನು ಪುನರುಚ್ಚರಿಸಿದರು.
ತೆಲಂಗಾಣದಲ್ಲಿ ನೀಡಿದ ಹೇಳಿಕೆ ಸಮರ್ಥಿಸಿಕೊಂಡ ಜಮೀರ್, ಸ್ಪೀಕರ್‌ಗೆ ನಾವು ಸೇರಿದಂತೆ ಬಿಜೆಪಿಯವರೂ ಕೈ ಮುಗಿಯಬೇಕು ಅಂದಿದ್ದೆ. ಸ್ಪೀಕರ್‌ಗೆ ಸಿಎಂ ಸೇರಿದಂತೆ ಎಲ್ಲರೂ ಕೈ ಮುಗೀತಾರೆ. ಅದರಲ್ಲಿ ತಪ್ಪೇನಿದೆ?. ಸ್ವಾತಂತ್ರ ಸಿಕ್ಕು ಇಷ್ಟು ವರ್ಷದಲ್ಲಿ ಮುಸ್ಲಿಂ ವ್ಯಕ್ತಿ ಸ್ಪೀಕರ್ ಆಗಿರಲಿಲ್ಲ. ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಅವಕಾಶ ಮಾಡಿಕೊಟ್ಟಿದೆ. ಬಿಜೆಪಿಯವರು ಯಾಕೆ ನನ್ನನ್ನು ಟಾರ್ಗೆಟ್ ಮಾಡ್ತಾರೋ ಗೊತ್ತಿಲ್ಲ. ಚರ್ಚೆಗೆ ಬೇರೆ ವಿಷಯಗಳಿಲ್ಲ. ಹೀಗಾಗಿ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸವಿಲ್ಲ. ಹಿಂದೂ, ಮುಸ್ಲಿಂ ಗಲಾಟೆ ಮಾಡಿಸೋದು ಬಿಜೆಪಿ ಕೆಲಸವಾಗಿದೆ. ಸಿದ್ದರಾಮಯ್ಯ ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀನಿ ಅಂದಿದ್ದಾರೆ, ಇದು ಸ್ವಾಗತಾರ್ಹ. ಬಿಜೆಪಿಯವರು ಸಬ್ ಕಾ ವಿಕಾಸ್ ಅಂತಾ ಹೇಳಿ ಮುಸ್ಲಿಂ ಅನುದಾನ ಕಡಿತ ಮಾಡಿದ್ರು ಎಂದರು.
ಇದನ್ನೂಓದಿ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ ತಾಜ್ ಮಹಲ್‌ಗಿಂತಲೂ ಸುಂದರವಾದ ದೇಶದ ಅತಿ ದೊಡ್ಡ ಮಸೀದಿ