ಹುಬ್ಬಳ್ಳಿ: ಪಡೆದ ಸಾಲಕ್ಕೆ ಬಡ್ಡಿ ಕಟ್ಟುವುದು ತಡವಾಗಿದೆ ಎಂದು ಆರೋಪಿಸಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಘಟನೆ ಇಲ್ಲಿನ ಗಾಂಧಿನಗರದಲ್ಲಿ ಬೆಳಕಿಗೆ ಬಂದಿದೆ.
ಗಾಂಧಿನಗರದ ನಿವಾಸಿ ಕೌಸರಬಾನು ಹಲ್ಲೆಗೊಳಗಾಗಿರುವ ಮಹಿಳೆ. ಇವರು ತಿಂಗಳಿಗೆ ಶೇ.5ರಷ್ಟು ಬಡ್ಡಿಗೆ ನಿಲೇಶ ಎಂಬ ವ್ಯಕ್ತಿಯಿಂದ 15 ಸಾವಿರ ರೂ. ಸಾಲ ಪಡೆದಿದ್ದರು. ಲಾಕ್‌ಡೌನ್‌ನಿಂದಾಗಿ ತಡವಾಗಿ ಬಡ್ಡಿ ಸಹಿತ 9,500ರೂ.ಅನ್ನು ಅಕ್ಟೋಬರ್ 1 ರಂದು ಮರುಪಾವತಿ ಮಾಡಿದ್ದರು. ಆದರೆ, ನಿಲೇಶ ಅಕ್ಟೋಬರ್ 2ರಂದು ಅವರ ಮನೆಗೆ ಹೋಗಿ, ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಬಡ್ಡಿ ನೀಡಿಲ್ಲ. ಅದಕ್ಕಾಗಿ ಪ್ರತಿ ವಾರ ಶೇ10ರಷ್ಟು ಮೀಟರ್ ಬಡ್ಡಿ ಸೇರಿಸಿ, 55 ಸಾವಿರ ನೀಡುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಾನೆ ಎಂದು ಕೌಸರಬಾನು ಆರೋಪಿಸಿದ್ದಾರೆ.
ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪರಿಣಾಮ ಆಕೆಯ ಮೈಮೇಲೆ ಗಾಯಗಳಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಚಿಕಿತ್ಸೆ ಬಳಿಕ ಹುಬ್ಬಳ್ಳಿಯ ಗೋಕುಲ ಪೊಲೀಸ್ ಠಾಣೆಯಲ್ಲಿ ಆರೋಪಿ ನಿಲೇಶನ ವಿರುದ್ಧ ದೂರು ನೀಡಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.