ಹುಬ್ಬಳ್ಳಿ: ನಗರದ ಗಬ್ಬೂರ್ ಬೈಪಾಸ್ ಬಳಿಯಿರುವ ಟೋಲ್ ಹತ್ತಿರ ಚಹಾ ಮಾರುತ್ತಿದ್ದ ವ್ಯಕ್ತಿಯೊರ್ವನಿಗೆ ಬೈಕ್ ಮೇಲೆ ಬಂದ ದುಷ್ಕರ್ಮಿಗಳು ಏಕಾಏಕಿ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ದಿನದಿಂದ ದಿನಕ್ಕೆ ರೌಡಿಗಳ ಹಾಗೂ ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿರುವ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯ ಗಬ್ಬೂರ್ ಬೈಪಾಸ್ ಬಳಿ, ಚಹಾ ಮಾರುತ್ತಿದ್ದ ಸಿದ್ದಪ್ಪ ಎಂಬ ವ್ಯಕ್ತಿಯ ಮೇಲೆ ಕೆಲವೊಂದಿಷ್ಟು ಪುಡಿ ರೌಡಿಗಳು ರಾತ್ರಿ ಸಮಯದಲ್ಲಿ ಮುಖಕ್ಕೆ ವಿನಾಕಾರಣ ಪಂಚ್ ಮಾಡಿರುವ ಪರಿಣಾಮ ಸಿದ್ದಪ್ಪನ ದವಡೆಯಲ್ಲಿರುವ ಎಲ್ಲಾ ಹಲ್ಲುಗಳು ಮುರಿದಿವೆ.
ಇನ್ನೂ ಈ ಘಟನೆ ನಡೆಯುತ್ತಿದ್ದ ವೇಳೆ ಸ್ಥಳದಲ್ಲೇ ಇದ್ದ ಪೋಲಿಸರು ಪುಂಡರ ಬೈಕನ್ನು ಬೆನ್ನುತ್ತಿದರೂ ಸಹ ಸಿಗದೇ ಎಸ್ಕೇಪ್ ಆಗಿದ್ದಾರೆ. ಇನ್ನೂ ಪೋಲಿಸರು ಬೆನ್ನತ್ತುವ ದೃಶ್ಯಗಳು ಸಿಸಿಟಿಯಲ್ಲಿ ಸೆರೆಯಾಗಿವೆ. ಈ ಕುರಿತು ಹುಬ್ಬಳ್ಳಿಯ ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.