ಧಾರವಾಡ: ಧಾರವಾಡದಲ್ಲಿ ನವೀಕರಣಗೊಂಡ ರೈಲ್ವೇ ನಿಲ್ದಾಣ ಲೋಕಾರ್ಪಣೆಗೊಳಿಸಿದ ಬಳಿಕ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕನ್ನಡದಲ್ಲಿ ಮಾತನಾಡಿ ಧಾರವಾಡ ಜನತೆಗೆ ಧನ್ಯವಾದಗಳುನ್ನು ತಿಳಿಸಿದರು.
ನಗರದಲ್ಲಿಂದು ನವೀಕರಣಗೊಂಡ ರೈಲ್ವೆ ನಿಲ್ದಾಣವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಾರ್ಪಣೆಗೊಳಿಸಿ ಬಳಿಕ ಮಾತನಾಡಿ, ಧಾರವಾಡದ ಜನತೆಗೆ ನನ್ನ ಧನ್ಯವಾದಗಳು. ನಾನು ಧಾರವಾಡ ಫೇಡಾ ತಿನ್ನಬೇಕು ಎಂದು ಕನ್ನಡದಲ್ಲಿ ಹೇಳಿ ಮಾತನ್ನು ಆರಂಭಿಸಿದ ಅವರು, ಇದು ದೊಡ್ಡ ಸಾಂಸ್ಕೃತಿಕ ಪ್ರದೇಶವಾಗಿದ್ದು, ಒಂದೇ ಜಿಲ್ಲೆಯವರಿಗೆ ಐದು ಜ್ಞಾನಪೀಠ ಪ್ರಶಸ್ತಿ ದೊರಕಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಒಂದು ಕಡೆ ಸಾಹಿತ್ಯ, ಒಂದು ಕಡೆ ಸಂಗೀತ ಮತ್ತೊಂದು ಕಡೆ ಪ್ರಹ್ಲಾದ್ ಜೋಶಿ, ಇನ್ನೊಂದು ಕಡೆ ಧಾರವಾಡ ಫೇಡಾ ಎಂದು ಹೇಳಿ ನಕ್ಕರು.
ಇನ್ನು ಪ್ರಹ್ಲಾದ್ ಜೋಶಿ ನಿಧಾನವಾಗಿ ಬರುತ್ತಾರೆ ಎರಡು ಧಾರವಾಡ ಫೇಡಾ ತಿನ್ನಿಸುತ್ತಾರೆ ಒಂದು ಯೋಜನೆ ಹೊಡೆದುಕೊಳ್ಳುತ್ತಾರೆ. ತುಂಬಾನೇ ಪವರ್ ಫುಲ್ ಮಿನಿಸ್ಟರ್ ಅವರು. ಜೋಶಿ ಅವರು ಬೇಡಿಕೆ ಇಟ್ಟರೆ ನನಗದು ಆದೇಶ ಇದ್ದಂತೆ, ಅವರ ಎಲ್ಲ ಬೇಡಿಕೆ ಈಡೇರಿಸುತ್ತೇನೆ ಕೊಂಚ ಕಾಲಾವಕಾಶ ನೀಡಿ, ನಿಜಾಮುದ್ದೀನ್ ರೈಲಿಗೆ ಪಂ. ಸವಾಯಿ ಗಂಧರ್ವರ ಹೆಸರು ಇಡೋ ವಿಚಾರ ಕೂಡಲೇ ಮಾಡಲಾಗುವುದು ಎಂದರು.
ಧಾರವಾಡದವರು ಫೇಡಾ ಕೊಟ್ಟರೆ ವಂದೇ ಭಾರತ್ ಕೊಡುತ್ತೇನೆ. ಇದೀಗ ಫೇಡಾ ಸಿಕ್ಕಿದೆ ನನಗೆ ನಾನು ಫೇಡಾ ತೆಗೆದುಕೊಂಡು ಜೋಶಿ ಅವರೊಂದಿಗೆ ಮೋದಿ ಬಳಿ ಹೋಗುತ್ತೇನೆ. ಧಾರವಾಡಕ್ಕೆ ವಂದೇ ಭಾರತ್ ರೈಲು ಬಗ್ಗೆ ಮನವಿ ಸಲ್ಲಿಸುತ್ತೇನೆ ಎಂದರು.
ನಮ್ಮಲ್ಲೇ ತಂತ್ರಜ್ಞರು ಇರುವಾಗ ಆಮದು ಏಕೆ? ಬಳಿಕ ವಂದೇ ಭಾರತ್ ರೈಲು ವಿಚಾರವಾಗಿ ಮಾತನಾಡಿ, ಮೋದಿ ಅವರು ನಮ್ಮ ದೇಶಕ್ಕೆ ವಿಶ್ವದಲ್ಲಿರುವ ಅತ್ಯುತ್ತಮ ರೈಲು ಬೇಕು ಎಂದು ಬೇಡಿಕೆ ಇಟ್ಟರು. ಕೆಲವರು ಅತ್ಯುತ್ತಮ ರೈಲುಗಳನ್ನ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲು ತಿಳಿಸಿದರು. ಇದಕ್ಕೆ ಒಪ್ಪದ ಮೋದಿ ನಮ್ಮ ದೇಶದಲ್ಲೇ ಶ್ರೇಷ್ಠ ಇಂಜಿನೀಯರ್ಗಳು ಇರುವಾಗ ಬೇರೆ ದೇಶದ ರೈಲುಗಳು ಏಕೆ ಎಂದು ಪ್ರಧಾನಿ ನಮ್ಮನ್ನು ಪ್ರಶ್ನಿಸಿದ್ದರು ಎಂದರು.
ಮತ್ತೆ 75 ರೈಲುಗಳ ನಿರ್ಮಾಣಕ್ಕೆ ಅನುಮತಿ: 2017ರಲ್ಲಿ ವಂದೇ ಭಾರತ್ ರೈಲು ನಿರ್ಮಾಣ ಕಾರ್ಯ ಆರಂಭಿಸಲಾಯಿತು. 2019ರಲ್ಲಿ ವಂದೇ ಭಾರತ್ ರೈಲು ಹೊರಗಡೆ ಬಂದವು ಇವು ಇದುವರೆಗೂ ದೇಶಾದ್ಯಂತ ಒಟ್ಟು 18 ಲಕ್ಷ ಕಿ.ಮೀ. ಯಾವುದೇ ಸಮಸ್ಯೆ ಇಲ್ಲದೇ ಓಡಿದ್ದು, ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ರೈಲುಗಳನ್ನ ಉತ್ಪಾದಿಸಿ ಅಂತಾ ಮೋದಿ ಹೇಳಿದ್ದು, 75 ರೈಲುಗಳ ನಿರ್ಮಾಣಕ್ಕೆ ಅನುಮತಿಸಿದ್ದಾರೆ ಎಂದು ಕೇಂದ್ರ ರೈಲ್ವೆ ಸಚಿವರು ಮಾಹಿತಿ ನೀಡಿದರು.
ನೀರೂ ಕೂಡ ಅಲುಗಾಡುವುದಿಲ್ಲ: ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿದರೆ ಅದ್ಭುತ ಅನುಭವ ಸಿಗುತ್ತೆ 180 ಕಿ.ಮೀ. ವೇಗವಾಗಿ ಓಡುವ ರೈಲಿನಲ್ಲಿ ನೀರು ಕೂಡ ಅಲುಗಾಡೋದಿಲ್ಲ ಎಂದರು. ಈ ರೈಲು ನೋಡಿ ವಿಶ್ವ ಅಲುಗಾಡಿದೆ. ಇದೆಲ್ಲ ಮೋದಿ ತಾಕತ್ತು ಎಂದು ಪ್ರಧಾನಿಗಳನ್ನ ಕೇಂದ್ರ ಸಚಿವರು ಗುಣಗಾನ ಮಾಡಿದರು. ನಾವು ಮೋದಿ ಟೀಮ್ ನಲ್ಲಿದ್ದೇವೆ ಜೋಶಿ ಬೋಲ್ಡ್ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಇದೇ ವೇಳೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಿಗೂ ಶಹಬ್ಬಾಶ್ಗಿರಿ ಕೊಟ್ಟರು ಅಶ್ವಿನಿ ವೈಷ್ಣವ್ .
ಇದನ್ನೂ ಓದಿ: ರಾಜ್ಯದಲ್ಲಿ ಆ್ಯಂಬುಲೆನ್ಸ್ ಸಮಸ್ಯೆ: ಮುಂದುವರಿದ ರಾಷ್ಟ್ರಗಳಂತೆ ಸೇವೆ ನೀಡಲು ಪ್ರಯತ್ನ; ಸಚಿವ ಸುಧಾಕರ್