ಹುಬ್ಬಳ್ಳಿ: ಮನೆ ಕಳ್ಳತನ ಮಾಡುತ್ತಿದ್ದ ಮೂರು ಜನ ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಕೇಶ್ವಾಪುರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ರಮೇಶ ಲಕ್ಷ್ಮಣ ಕಾಳೆ, ಸುರೇಶ ಗಂಗಾರಾಮ ದೌಲತ್, ಅಪ್ಪಾ ದೌಲತ್ ಚವ್ಹಾಣ ಬಂಧಿತ ಆರೋಪಿಗಳು. ಹಲವು ದಿನಗಳಿಂದ ಹು-ಧಾ ಅವಳಿನಗರದಲ್ಲಿ ಬೀಗ ಹಾಕಿದ ಮನೆಗಳಿಗೆ ಹೋಗಿ ಕಳ್ಳತನ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಖಚಿತ ಮಾಹಿತಿ ಮೇರೆಗೆ ಹು-ಧಾ ಮಹಾನಗರ ಪೊಲೀಸ್ ಕಮಿಷನರ್ ಆರ್. ದೀಲಿಪ್, ಡಿಸಿಪಿ ನಾಗೇಶ್ ಡಿ.ಎಲ್, ಎಸಿಪಿ ಶಂಕರ್ ರಾಗಿ ಮಾರ್ಗದರ್ಶನದಲ್ಲಿ ತಂಡವೊಂದನ್ನು ರಚಿಸಿಕೊಂಡಿದ್ದ ಕೇಶ್ವಾಪುರ ಠಾಣೆಯ ಪೊಲೀಸರು ಅಧಿಕಾರಿಗಳಾದ ಸುರೇಶ ಕುಂಬಾರ, ಸಚಿನ್ ದಾಸರೆಡ್ಡಿ, ಬಿ.ಬಿ.ಹಾದಿಮನಿ ನೇತೃತ್ವದಲ್ಲಿ ಮೂವರು ಅಂತಾರಾಜ್ಯ ಕಳ್ಳರನ್ನು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತರಿಂದ 2,75,200 ಮೌಲ್ಯದ ಚಿನ್ನಾಭರಣ ಹಾಗೂ 20,000 ನಗದು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಭೇದಿಸಿದ ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಆಯುಕ್ತರಾದ ಆರ್.ದೀಲಿಪ್ ಬಹುಮಾನ ಘೋಷಿಸಿದ್ದಾರೆ.