ಧಾರವಾಡ: ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಸಿನಿಮಾ ರೀತಿಯಲ್ಲೇ ಹತ್ಯೆ ಮಾಡಿ, ಅದನ್ನು ಅಪಘಾತ ಪ್ರಕರಣ ಎಂಬಂತೆ ಬಿಂಬಿಸಿರುವ ಘಟನೆ ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ನಡೆದಿದೆ. ತಡಕೋಡ ಗ್ರಾಮದ ಸುರೇಶ ದೇವರವರ ಕೊಲೆಯಾದ ವ್ಯಕ್ತಿ. ಶಿವಪ್ಪ ಬಡಿಗೇರ ಕೊಲೆ ಮಾಡಿದ ಆರೋಪಿ.
ಸಾಲದ ಹಣ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯ ಹತ್ಯೆ: ಇಬ್ಬರು ತಡಕೋಡ ಗ್ರಾಮದ ನಿವಾಸಿಗಳಾಗಿದ್ದಾರೆ. ಮೃತ ಸುರೇಶ ಅವರ ಮನೆಯಲ್ಲಿಯೇ ಕೊಲೆ ಮಾಡಿದ್ದ ಆರೋಪಿ ಶಿವಪ್ಪ ಬಡಿಗೇರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶಿವಪ್ಪನಿಗೆ ಮೃತ ಸುರೇಶ 60 ಸಾವಿರ ಸಾಲ ನೀಡಿದ್ದರು. ಇದರಲ್ಲಿ 30 ಸಾವಿರ ಸಾಲ ತಿರಿಸಿದ್ದರು. ಉಳಿದ 30 ಸಾವಿರ ಸಾಲದ ಹಣ ವಾಪಸ್ ಕೊಡುವಂತೆ ಸುರೇಶ ಕೇಳಿದ್ದರು. ಸಾಲ ವಾಪಸ್ ಕೇಳಿದ್ದ ಕಾರಣಕ್ಕೆ ಕೊಲೆ ಮಾಡಲಾಗಿದೆ. ಹತ್ಯೆ ಮಾಡಿ ಬೈಕ್ ಅಪಘಾತವೆಂದು ಬಿಂಬಿಸಲು ಹೋದ ಆರೋಪಿ ಶಿವಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಗ್ರಾಮಸ್ಥರ ಎದುರು ಆರೋಪಿ ಹೇಳಿದ್ದೇನು?: ಕೊಲೆ ಮಾಡಿದ ಆರೋಪಿ ಶಿವಪ್ಪ, ತಾನೇನು ಮಾಡಿಯೇ ಇಲ್ಲ. ಸುರೇಶ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಘಟನೆ ನಡೆದ ಸ್ಥಳದಲ್ಲಿ ಇದ್ದ ಗ್ರಾಮಸ್ಥರ ಮುಂದೆ ಹೇಳಿಕೊಂಡಿದ್ದ. ಆರಂಭದಲ್ಲಿ ಇದೊಂದು ಅಪಘಾತ ಎಂದು ಎಲ್ಲರೂ ನಂಬಿದ್ದರು. ಆದರೆ, ಮೃತ ವ್ಯಕ್ತಿಯ ತಲೆಗೆ ಮಾತ್ರ ಗಂಭೀರವಾಗಿ ಗಾಯವಾಗಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು ಶಿವಪ್ಪನನ್ನು ವಿಚಾರಣೆಗೆ ಒಳಪಡಿಸಿದ ನಂತರ, ಹತ್ಯೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.
ಪೊಲೀಸ್ ವಿಚಾರಣೆ ನಂತರ ಸತ್ಯ ಬಯಲು: ಡಿ.24 ರಂದು ಸಂಜೆ ವೇಳೆ ಇಬ್ಬರು ಒಂದೇ ಮನೆಯಿಂದ ಬೇರೆ ಗ್ರಾಮಕ್ಕೆ ಹೋಗುವುದಾಗಿ ತೆರಳಿದ್ದರು. ಆದರೆ ಶಿವಪ್ಪ ಬೈಕ್ ಹಿಂಭಾಗದಲ್ಲಿ ಕುಳಿತು ಹಣ ಬಿದ್ದಿದೆ ಎಂದು ಬೈಕ್ ನಿಲ್ಲಿಸಿದ ಸುರೇಶ ಹಣ ಹುಡುಕಾಟ ಮಾಡುತ್ತಿದ್ದ. ಈ ವೇಳೆ ಆತನ ತಲೆ ಹಿಂಬದಿಗೆ ಶಿವಪ್ಪ ಕಬ್ಬಿಣದ ರಾಡ್ ನಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದನು. ಬಳಿಕ ಆ್ಯಕ್ಸಿಡೆಂಟ್ ಆಗಿದೆ ಎಂದು ಬಿಂಬಿಸಿದ್ದನು. ಬೈಕ್ ಆಕ್ಸಿಡೆಂಟ್ ಆಗಿರುವ ಬಗ್ಗೆ ಯಾವುದೇ ಕುರುಹುಗಳು ಇರಲಿಲ್ಲ. ಅನುಮಾನಗೊಂಡು ಪೊಲೀಸರು ವಿಚಾರಣೆ ನಡೆಸಿದ ಬಳಿಕ, ಪ್ರಕರಣದ ಸತ್ಯ ಬಯಲಾಗಿದೆ. ಇದೀಗ ಹಣ ಕಳೆದುಕೊಂಡ ಸುರೇಶ ಮೃತಪಟ್ಟರೆ, ಹಣ ಪಡೆದುಕೊಂಡ ಶಿವಪ್ಪ ಕಂಬಿ ಎಣಿಸುವಂತಾಗಿದೆ.
ಇದನ್ನೂ ಓದಿ: 17 ವರ್ಷದ ಮಗಳ ಕೊಂದು ಶವ ಸುಟ್ಟು ಹಾಕಿದ ತಂದೆ; ಕೋಲಾರದಲ್ಲಿ ಮರ್ಯಾದಾ ಹತ್ಯೆ