ಧಾರವಾಡ: ಮಹಾದಾಯಿ, ಕಳಸಾ-ಬಂಡೂರಿ ನಾಲಾ ಜೋಡಣೆ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಡಿಪಿಆರ್ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ಸರ್ಕಾರ ಒಂದು ವರ್ಷದ ಪೂರೈಸಿದ ಹಿನ್ನೆಲೆ ನಗರದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಗೆಜೆಟ್ ನೋಟಿಫಿಕೇಷನ್ ಈಗಾಗಲೇ ಆಗಿದೆ. ಅದರನ್ವರ ಹೊಸ ಡಿಪಿಆರ್ ಸಲ್ಲಿಸುವಂತೆ ಕೇಂದ್ರ ಸರ್ಕಾರ ಕೇಳಿದೆ ಎಂದರು.
ಅರಣ್ಯ ಭಾಗದಲ್ಲಿ ಕೆಲಸ ಮಾಡಬೇಕಿರುವುದರಿಂದ ಹೊಸ ಡಿಪಿಆರ್ ಪ್ರಸ್ತಾವನೆ ಸಿದ್ಧಪಡಿಸಬೇಕಿದೆ. ಈ ನಿಟ್ಟಿನಲ್ಲಿ ನೀರಾವರಿ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.
ಕೊರೊನಾದಲ್ಲಿ ಅವ್ಯವಹಾರ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶೆಟ್ಟರ್, ರಾಜ್ಯ ಮತ್ತು ಜಿಲ್ಲಾಮಟ್ಟದ ಬಗ್ಗೆ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಜಿಲ್ಲಾಡಳಿತ ಮತ್ತು ಸರ್ಕಾರದ ಜೊತೆ ಕಾಂಗ್ರೆಸ್ನವರು ಕೈಜೋಡಿಸಬೇಕಿತ್ತು. ಒಂದು ರಚನಾತ್ಮಕ ಸಲಹೆ ಸೂಚನೆ ಕೊಟ್ಟು ನೈತಿಕ ಬೆಂಬಲ ಕೊಡಬೇಕಿತ್ತು. ಆದರೆ ಅದು ಬಿಟ್ಟು ಟೀಕೆ ಟಿಪ್ಪಣಿಯಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.