ಹುಬ್ಬಳ್ಳಿ: ಕ್ರೀಡೆ ಎಂಬುದು ಮನುಷ್ಯನ ಕಾರ್ಯಶೀಲತೆಯನ್ನು ಹೆಚ್ಚಿಸುವುದು. ಅದರಂತೆ ಒಬ್ಬರು ಇದನ್ನು ಉದ್ಯೋಗ ಕ್ಷೇತ್ರವನ್ನಾಗಿ ಮಾಡಿಕೊಂಡರೆ, ಮತ್ತೊಬ್ಬರು ಹವ್ಯಾಸ ಮಾಡಿಕೊಳ್ಳುವರು. ಅದೇ ರೀತಿ ಇಲ್ಲೊಬ್ಬರು ಹವ್ಯಾಸಕ್ಕೆಂದು ಆಡಲು ಹೋಗಿ ಇದೀಗ ಕ್ರೀಡೆಯಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರದಲ್ಲಿ ಮಿಂಚುತ್ತಿದ್ದಾರೆ.
ಹೌದು.. ವಿದ್ಯಾಕಾಶಿ ಎಂದು ಪ್ರಸಿದ್ಧ ಆಗಿರುವ ಧಾರವಾಡ ಜಿಲ್ಲೆ, ಶಿಕ್ಷಣಕ್ಕೆ ಅಷ್ಟೇ ಸೀಮಿತ ಅಲ್ಲದೇ ಕ್ರೀಡೆಯಲ್ಲೂ ಮೇಲುಗೈ ಸಾಧಿಸಿದೆ. ಅದರಂತೆ ಹುಬ್ಬಳ್ಳಿಯ ನಿವಾಸಿ ಅನಿತಾ ಬಿಚಗತ್ತಿ ಅಟ್ಯಾ ಪಟ್ಯಾ ಕ್ರೀಡೆಯಲ್ಲಿ ಸಾಧನೆ ಮಾಡಿ ಭಾರತ ತಂಡದ ಆಟಗಾರ್ತಿಯಾಗಿದ್ದಾರೆ. ರಾಷ್ಟ್ರೀಯ ಟೂರ್ನಿಗಳಲ್ಲಿ 11 ಬಾರಿ ಆಡಿರುವ ಈ ಕುವರಿ, ರಾಜ್ಯ ಸರ್ಕಾರದ 2019 ನೇ ಸಾಲಿನ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಭಾಜನಳಾಗಿದ್ದಾಳೆ. ತರಬೇತುದಾರ ಆನಂದ ಸದ್ಲಾಪುರ ಅವರ ಗರಡಿಯಲ್ಲಿ ಪಳಗಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಅಟ್ಯಾ ಪಟ್ಯ ಕ್ರೀಡೆಯಲ್ಲಿ ಸಾಧನೆ ಮಾಡುವ ಮೂಲಕ ಹುಬ್ಬಳ್ಳಿಯ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾಳೆ.
ಅಷ್ಟೇ ಅಲ್ಲದೇ ಅನಿತಾ 2018 ರಲ್ಲಿ ನೇಪಾಳ ಮತ್ತು 2019 ರಲ್ಲಿ ಭೂತಾನ್ನಲ್ಲಿ ನಡೆದ ಅಂತಾರಾಷ್ಟ್ರೀಯ ಅಟ್ಯಾ ಪಟ್ಯಾ ಚಾಂಪಿಯನ್ಶಿಪ್ನಲ್ಲಿ, ಭಾರತ ತಂಡಕ್ಕೆ ನಾಯಕಿ ಆಗಿದ್ದರು. ಇನ್ನು ಇವಳ ಸಾಧನೆಯನ್ನು ಕಂಡು, ಮುಖ್ಯಮಂತ್ರಿ ಯಡಿಯೂರಪ್ಪ ಅವರು, ನವೆಂಬರ್ 2 ರಂದು, ಬೆಂಗಳೂರಿನ ವಿಧಾನಸೌಧದಲ್ಲಿ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ನೀಡಿ, ಒಂದು ಲಕ್ಷ ರೂ. ಚೆಕ್ನ್ನು ಕೊಟ್ಟು ಪ್ರೋತ್ಸಾಹಿಸಿದ್ದಾರೆ. ಇವಳ ಸಾಧನೆಗೆ ಹುಬ್ಬಳ್ಳಿ ಜನತೆ ಹಾರೈಸಿದ್ದಾರೆ. ಅಂತಾರಾಷ್ಟ್ರೀಯ ಅಟ್ಯಾಪಟ್ಯಾ ಕ್ರೀಡೆಯಲ್ಲಿ ಪ್ರಶಸ್ತಿ ಬಾಚಿಕೊಂಡಿರುವ ಇವಳ ಸಾಧನೆಗೆ ಕುಟುಂಬಸ್ಥರು ಸಂತಸಗೊಂಡಿದ್ದಾರೆ.
ಒಟ್ಟಿನಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಅನಿತಾಳ ಕನಸು ನನಸಾಗಲಿ, ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದೇ ಎಲ್ಲರ ಅಭಿಲಾಷೆಯಾಗಿದೆ.