ಧಾರವಾಡ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಒಂದು ದಿನದ ಸಾಂಕೇತಿಕ ಧರಣಿ ನಡೆಸಲಾಗುವುದು ಎಂದು ವೀರಶೈವ-ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ತಿಳಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿರುವ ಅವರು, ಸಪ್ಟೆಂಬರ್ 24 ರಂದು ಗುರುವಾರ ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಲಾಗುವುದು. ಧರಣಿಯಲ್ಲಿ ವಿವಿಧ ಮಠಾಧೀಶರು, ಸಮಾಜದ ಗಣ್ಯರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವೀರಶೈವ- ಲಿಂಗಾಯತ ಸಮಾಜವನ್ನು ಹಿಂದುಳಿದ ವರ್ಗದ(ಓಬಿಸಿ) ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಧರಣಿ ನಡೆಸಲಾಗುವುದು ಎಂದರು.
ಈ ಧರಣಿಯಲ್ಲಿ ಸಮಾಜದ ಜನರು ಭಾಗವಹಿಸಿ ಯಶಸ್ವಿಗೊಳಿಸಬೇಕು. ನಮ್ಮ ಸಮಾಜದ ಬಾಂಧವರು ಎದುರಿಸುವ ಹಾಗೂ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಹಕರಿಸಬೇಕು ಎಂದು ಹುಣಸಿಮರದ ಮನವಿ ಮಾಡಿದ್ರು.