ಹುಬ್ಬಳ್ಳಿ: ಜಿಲ್ಲೆಯ ಐವರು ಮಾಧ್ಯಮ ಪ್ರತಿನಿಧಿಗಳು ಮುಂಜಾಗ್ರತಾ ಕ್ರಮವಾಗಿ ಸ್ವಯಂ ಪ್ರೇರಣೆಯಿಂದ ಹೋಮ್ ಕ್ವಾರಂಟೈನ್ಗೆ ಒಳಗಾಗಿದ್ದರು. ಅವರಲ್ಲಿ ನಾಲ್ವರು ಪತ್ರಕರ್ತರು ಕೊರೊನಾ ತಪಾಸಣೆಗೊಳಪಟ್ಟಿದ್ದು, ನಾಲ್ವರ ವರದಿ ಕೂಡಾ ನೆಗೆಟಿವ್ ಬಂದಿದೆ.
ಈ ಮೂಲಕ ಹುಬ್ಬಳ್ಳಿಯ ಉಳಿದ ಪತ್ರಕರ್ತರು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೊಬ್ಬರನ್ನು ಪರೀಕ್ಷೆಗೆ ಒಳಪಡುವ ಅಗತ್ಯ ಕಂಡು ಬಾರದ ಕಾರಣ ಪರೀಕ್ಷೆಗೆ ಒಳಪಡಿಸಿಲ್ಲ.
ನಗರದ ವಿವಿಧ ಮಾಧ್ಯಮ ಸಂಸ್ಥೆಗಳಿಗೆ ಸೇರಿದ ಐವರು ಪತ್ರಕರ್ತರು ತಮ್ಮಲ್ಲಿ ಕೊರೊನಾದ ಯಾವುದೇ ಲಕ್ಷಣಗಳಿಲ್ಲದಿದ್ದರೂ ಮುಂಜಾಗ್ರತಾ ಕ್ರಮವಾಗಿ ಸ್ವಯಂ ಪ್ರೇರಣೆಯಿಂದ ಹೋಮ್ ಕ್ವಾರಂಟೈನ್ಗೆ ಒಳಗಾಗಿದ್ದರು.
ಏ. 9ರಂದು ಶಬ್ ಎ ಬರಾತ್ ಆಚರಣೆಯ ಕುರಿತು ವರದಿಗಾಗಿ ಅವರು ಹುಬ್ಬಳ್ಳಿಯ ತೊರವಿಹಕ್ಕಲದ ಖಬರಸ್ತಾನಕ್ಕೆ ತೆರಳಿದ್ದರು. ಸ್ಮಶಾನದ ಕಾವಲುಗಾರನಿಗೆ ( ಪಿ-363) ಕೋವಿಡ್ ಸೋಂಕು ಇರುವುದು ಏ. 18ರಂದು ದೃಢಪಟ್ಟ ಹಿನ್ನೆಲೆಯಲ್ಲಿ ಈ ಐವರು ಪತ್ರಕರ್ತರನ್ನು ದ್ವಿತೀಯ ಹಂತದ ಸಂಪರ್ಕಿತರು ಎಂದು ಪರಿಗಣಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಹೋಮ್ ಕ್ವಾರಂಟೈನ್ಗೆ ಒಳಪಡಿಸಿ ಪರೀಕ್ಷೆಗೆ ನಡೆಸಲಾಗಿತ್ತು.