ಹುಬ್ಬಳ್ಳಿ: ಸಾಧನೆಗೆ ವಯಸ್ಸು ಅಡ್ಡಿಯಲ್ಲ. ಸಾಧಿಸುವ ಛಲವೊಂದಿದ್ದರೇ ಯಾವುದೇ ಗುರಿಯನ್ನು ತಲುಪಬಹುದು ಎಂಬುದಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿಯ ಈ ಸಾಧಕರೊಬ್ಬರು ಸಾಕ್ಷಿಯಾಗಿದ್ದಾರೆ. ತಮ್ಮ 63ನೇ ವಯಸ್ಸಿನಲ್ಲಿಯೂ ಕೂಡ ಸೈಕ್ಲಿಂಗ್ನಲ್ಲಿ ಸಾಧನೆ ಮಾಡುವ ಮೂಲಕ ಇಂದಿನ ಯುವ ಪೀಳಿಗೆಗೆ ಇವರು ಮಾದರಿಯಾಗಿದ್ದಾರೆ.
ಹೌದು, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಗುರುಮೂರ್ತಿ ಮಾತರಂಗಿಮಠ ಎಂಬುವವರೇ ಈ ಸಾಧಕ. ಇವರು ತಮ್ಮ 63ನೇ ವಯಸ್ಸಿನಲ್ಲಿ 5,000 ಕಿ.ಮೀ ಸೈಕಲ್ ಸವಾರಿ ಮಾಡಿರುವುದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ.
ಏಪ್ರಿಲ್‌ನಿಂದ ಆಗಸ್ಟ್‌ವರೆಗೆ 100 ದಿನಗಳ ಕಾಲ ಪ್ರತಿದಿನ 50 ಕಿ.ಮೀ ಸೈಕಲ್ ಸವಾರಿ ಮಾಡಿದರು. ಇದಕ್ಕೂ ಮೊದಲು ಅವರು ಹುಬ್ಬಳ್ಳಿ ಬೈಸಿಕಲ್ ಕ್ಲಬ್‌ನಿಂದ 2020–21 ಹಾಗೂ 2021–22 ಸಾಲಿನಲ್ಲಿ ಹಲವು ಪ್ರಶಸ್ತಿ ಗೆದ್ದುಕೊಂಡಿದ್ದರು. ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಈಗ 5000 ಕಿಲೋಮೀಟರ್ ಸೈಕ್ಲಿಂಗ್ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ವಿಶಿಷ್ಟ ದಾಖಲೆ ಮಾಡಿದ್ದಾರೆ.
ಸೈಕ್ಲಿಂಗ್ ಆಯ್ಕೆ ಹಿಂದಿದೆ ಒಂದು ಕಾರಣ: ಚಾರ್ಟರ್ಡ್ ಅಕೌಂಟೆಂಟ್ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಗುರುಮೂರ್ತಿ ಮಾತರಂಗಿಮಠ ಅವರು ಮೊದಲಿನಿಂದಲೂ ಹಲವು ಸ್ಪೋರ್ಟ್ಸ್ಗಳಲ್ಲಿ ಆಸಕ್ತಿ ಹೊಂದಿದ್ದರು. ಕ್ರಿಕೆಟ್ ವಾಲಿಬಾಲ್, ಫುಟ್ ಬಾಲ್, ಟೆನ್ನಿಸ್ ಸೇರಿದಂತೆ ಹಲವು ಆಟಗಳನ್ನು ಆಡುತ್ತಿದ್ದರು. ಆದರೆ ಅವರಿಗೆ 60ನೇ ವಯಸ್ಸಿನಲ್ಲಿ ಫುಟ್ ಕಾರ್ನ್ (ಕಾಲಿನಲ್ಲಿ ಕಾಣಿಸಿಕೊಳ್ಳುವ ಆಣಿ) ಆಗಿ, ನಡೆಯಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅವರು ಆರೋಗ್ಯದ ದೃಷ್ಟಿಯಿಂದ ಯಾವುದಾದರೂ ಚಟುವಟಿಕೆ ಮಾಡಲು ಯೋಚಿಸಿದರು.
ತಮ್ಮ ನಿವಾಸ ಶಿರೂರ ಪಾರ್ಕ್ ಬಳಿ ಸೈಕಲ್ ಸವಾರನೊಬ್ಬನನ್ನು ಗಮನಿಸಿದ ಅವರು, ಪಾದಕ್ಕೆ ಭಾರ ಬೀಳದಂತೆ ದೈಹಿಕ ಚಟುವಟಿಕೆ ಒಳ್ಳೆಯದೆಂದು ಸೈಕ್ಲಿಂಗ್ ನತ್ತ ತಮ್ಮ ಒಲವು ಹರಿಸಿದರು. ಅಲ್ಲದೆ ಸೈಕ್ಲಿಂಗ್ ಮಾಡುವುದರಿಂದ ದೈಹಿಕವಾಗಿಯೂ ಆರೋಗ್ಯವಾಗಿರಬಹುದು ಮತ್ತು ಪರಿಸರ ರಕ್ಷಣೆಯಾಗುತ್ತದೆ ಎಂಬ ನಿಲುವು ತಾಳಿದ ಗುರುಮೂರ್ತಿ ಸೈಕ್ಲಿಂಗ್ ಆರಂಭಿಸಿದರು. ಆಗಿನಿಂದ ಆರಂಭವಾದ ಈ ಚಟುವಟಿಕೆ, ಈಗ ತಮ್ಮ ಇಳಿ ವಯಸ್ಸಿನಲ್ಲಿ ಸೈಕಲ್ನಲ್ಲಿ 5 ಸಾವಿರ ಕಿ.ಮೀ ಕ್ರಮಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆಯುವವರೆಗೆ ತಲುಪಿದೆ.
ಯುವ ಪೀಳಿಗೆಗೆ ಕಿವಿಮಾತು: ಈಗಿನ ಯುವ ಪೀಳಿಗೆ ಮೋಟಾರು ವಾಹನಗಳತ್ತ ಮಾರು ಹೋಗುತ್ತಿದ್ದು, ಇದರಿಂದ ಪರಿಸರ ಮಾಲಿನ್ಯ ಮತ್ತು ಆರೋಗ್ಯ ಕೂಡ ಹಾಳಾಗುತ್ತದೆ. ಇದರ ಬಗ್ಗೆ ಯುವ ಜನತೆಯಲ್ಲಿ ಅರಿವು ಮೂಡಿಸಿ ಸೈಕ್ಲಿಂಗ್ನತ್ತ ಪ್ರೇರೇಪಿಸುವ ಕೆಲಸ ಮಾಡುತ್ತಿದ್ದಾರೆ. ಇದೀಗ ಇವರ ಸಾಧನೆಯಿಂದ ಪ್ರೇರಣೆಗೊಂಡ ನೂರಾರು ಯುವಕರು ಸೈಕ್ಲಿಂಗ್ ಮಾಡುತ್ತಿದ್ದಾರೆ.
ಗುರುಮೂರ್ತಿ ಮೇ 11ರಿಂದ ಆ. 18ರ ವರೆಗೆ ಒಟ್ಟು 5,000 ಕಿ.ಮೀ ದೂರವನ್ನು 100 ದಿನಗಳವರೆಗೆ ಪ್ರತಿದಿನ 50 ಕಿ.ಮೀ ಸೈಕಲ್ ಸವಾರಿ ಮಾಡಿದ್ದಾರೆ. ಗುರುಮೂರ್ತಿ ಪ್ರತಿದಿನ ಬೆಳಗ್ಗೆ 4ರಿಂದ 8 ಗಂಟೆ ಒಳಗೆ ಸೈಕಲ್ನಲ್ಲಿ 50 ಕಿ.ಮೀ ಕ್ರಮಿಸುತ್ತಿದ್ದರು. ಅಂತಿಮವಾಗಿ ಈ ಸಾಧನೆ ಮಾಡಿ, ಇಂಡಿಯಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಅವರ ಹೆಸರು ದಾಖಲಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಗುರುಮೂರ್ತಿ ಸಾಧನೆಗೆ ಸೈಕಲ್ ಕ್ಲಬ್ ಸದಸ್ಯ ಸುಬ್ರಮಣ್ಯ ಅವರು ಸಂತೋಷ ವ್ಯಕ್ತಪಡಿಸಿದ್ದು, ಇವರ ಸಾದನೆ ಈಗಿನ ಯುವ ಪೀಳಿಗೆಗೆ ಮಾದರಿಯಾಗಿದೆ. ಈ ಸಾಧನೆ ಸುಲಭವಲ್ಲ. ಬೆಳಗ್ಗೆ 4 ಗಂಟೆಯಿಂದ ನಿರಂತರವಾಗಿ ಬೆ. 8 ಗಂಟೆಯವರೆಗೆ 50 ಕಿ.ಮೀ ನಂತೆ 100 ದಿನಗಳವರಗೆ ಸೈಕ್ಲಿಂಗ್ ಮಾಡಿ ಈ ಸಾಧನೆಗೈದಿರುವುದು ಮಹತ್ತರ. ಅವರ ನಿರಂತರ ಪರಿಶ್ರಮಕ್ಕೆ ಸಿಕ್ಕ ಫಲ ಇದು. ಯುವಕರನ್ನು ಸೈಕ್ಲಿಂಗ್ಗೆ ಪ್ರೇರೇಪಿಸುವ ಮೂಲಕ ಹುಬ್ಬಳ್ಳಿ ನಗರದ ಜನತೆ ವಾಹನ ಬಿಟ್ಟು ಸೈಕಲ್ ಏರುವಂತೆ ಹುರಿದುಂಬಿಸುವ ಕಾಯಕ ಮಾಡುತ್ತಿದ್ದಾರೆ. ಹೀಗಾಗಿ ಟೆಂಡರ್ ಶ್ಯೂರ್ ರಸ್ತೆಗೆ ಗುರುಮೂರ್ತಿ ರಸ್ತೆ ಹೆಸರಿಟ್ಟರೆ ಉತ್ತಮ ಎನ್ನುತ್ತಾರೆ.
ಇದನ್ನೂ ಓದಿ: ಚಾಲನೆ ವೇಳೆ ನಿದ್ರೆಗೆ ಜಾರುವ ಅಭ್ಯಾಸವೇ? ಡೋಂಟ್ ವರಿ..! ಇಲ್ಲಿದೆ ನಿಮ್ಮನ್ನು ಎಚ್ಚರಗೊಳಿಸುವ ಕನ್ನಡಕ