ಹುಬ್ಬಳ್ಳಿ: ಬುಧವಾರ ಹುಬ್ಬಳ್ಳಿಯಲ್ಲಿ ಯುವಕನ ಭೀಕರ ಹತ್ಯೆ ನಡೆದಿತ್ತು. ಹಾಡಹಗಲೇ ಮಾರಕಾಸ್ತ್ರದಿಂದ ಸಿಲ್ವರ್ ಟೌನ್ನಲ್ಲಿ ಮೌಲಾಲಿ ಎಂಬ ಯುವಕನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಇದೀಗ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕೊಲೆ ಮಾಡಿದ ಆರೋಪ ಹೊತ್ತಿದ್ದ ಪರಸಪ್ಪ (50) ಎಂಬಾತ ಅಪೂರ್ವ ನಗರದ ಪ್ರಮುಖ ರಸ್ತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕನ ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಮುನ್ನವೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಯುವಕನ ಕೊಲೆ ಮಾಡಲಾಗಿದ್ದ ಎಂಬ ಆರೋಪ ಹೊತ್ತಿದ್ದ ಪರಸಪ್ಪ ನಿರ್ಮಾಣ ಹಂತದ ಕಟ್ಟಡದಲ್ಲಿ ವಾಚ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರ ನಿವಾಸಿಯಾಗಿರುವ ಪರಸಪ್ಪ, ಕುಟುಂಬದ ಜೊತೆಗೆ ನಿರ್ಮಾಣ ಹಂತದಲ್ಲಿ ಕಟ್ಟಡದಲ್ಲಿ ವಾಸವಿದ್ದ. ಪರಸಪ್ಪನ ವಿವಾಹಿತ ಮಗಳ ಜೊತೆಗೆ ಕೊಲೆಯಾದ ಮೌಲಾಲಿ ಸಂಬಂಧ ಇಟ್ಟುಕೊಂಡಿದ್ದನು ಎಂಬ ಅನುಮಾನವಿತ್ತು. ಇದರಿಂದ ಕುಪಿತಗೊಂಡು ತಂದೆ ಪರಸಪ್ಪ ಯುವಕ ಮೌಲಾಲಿಯನ್ನು ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಪೊಲೀಸರು ಕೊಲೆ ಆರೋಪ ಹೊತ್ತಿದ್ದ ಪರಸಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ನಿರ್ಧರಿಸಿದ್ದರು. ಆದ್ರೆ ಅಷ್ಟೊತ್ತಿಗಾಗಲೇ ಪರಸಪ್ಪ ಆತ್ಮಹತ್ಯೆ ಶರಣಾಗಿದ್ದಾನೆ.
ಇನ್ನು ಕೊಲೆಯಾಗಿದ್ದ ಮೌಲಾಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೊಡ ತಾಲೂಕಿನ ಮರಗಡಿ ನಿವಾಸಿಯಾಗಿದ್ದು, ಗಾರೆ ಕೆಲಸದ ನಿಮಿತ್ತವಾಗಿ ಹುಬ್ಬಳ್ಳಿಗೆ ಬಂದಿದ್ದ. ಘಟನಾ ಸ್ಥಳಕ್ಕೆ ಗೋಕುಲ ರೋಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆದ್ರೆ ಪರಸಪ್ಪನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಬೆಂಗಳೂರು ಕೊಲೆ ಆರೋಪಿ ಬಂಧನ: ರೇಗಿಸುತ್ತಿದ್ದ ಎಂಬ ಕಾರಣಕ್ಕೆ ಸಹೋದ್ಯೋಗಿಯನ್ನು ಹತ್ಯೆಗೈದಿದ್ದ ಆರೋಪಿಯನ್ನು ಯಲಹಂಕ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಮಲ್ಲಿಕಾರ್ಜುನ (24) ಎಂಬಾತನ್ನನು ರಾಜರಥ (25) ಹತ್ಯೆಗೈದಿದ್ದು ಬಂಧಿಸಲಾಗಿದೆ.
ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಮಾಲ್ ಒಂದರ ಬಟ್ಟೆಯಂಗಡಿಯಲ್ಲಿ ಮಲ್ಲಿಕಾರ್ಜುನ ಹಾಗೂ ರಾಜರಥ ಕ್ಯಾಶಿಯರ್ ಕೆಲಸ ಮಾಡುತ್ತಿದ್ದರು. ಬಟ್ಟೆಗಳ ಹಣಕಾಸಿನ ವಿಚಾರಕ್ಕೆ, ಕ್ಯಾಶ್ ಸರಿಯಾಗಿ ಜಮಾ ಮಾಡುವುದಿಲ್ಲ ಎಂದು ಮಲ್ಲಿಕಾರ್ಜುನ ಸದಾ ರಾಜರಥನನ್ನು ರೇಗಿಸುತ್ತಿದ್ದ. ಇದೇ ವಿಚಾರವಾಗಿ ಸೆಪ್ಟೆಂಬರ್ 26ರಂದು ಸಂಜೆ ಇಬ್ಬರ ನಡುವೆ ಜಗಳವಾಗಿತ್ತು. ಪರಸ್ಪರ ಜಗಳ ವಿಕೋಪಕ್ಕೆ ತಿರುಗಿದಾಗ ರಾಜರಥ ಕತ್ತರಿಯಿಂದ ಮಲ್ಲಿಕಾರ್ಜುನನ ಎದೆಗೆ ಇರಿದು ಪರಾರಿಯಾಗಿದ್ದ. ತೀವ್ರ ರಕ್ತಸ್ರಾವದಿಂದ ಮಲ್ಲಿಕಾರ್ಜುನ ಸಾವನ್ನಪ್ಪಿದ್ದ. ಇದೀಗ ಪ್ರಕರಣ ದಾಖಲಿಸಿಕೊಂಡ ಯಲಹಂಕ ಠಾಣಾ ಪೊಲೀಸರು ಸದ್ಯ ಆರೋಪಿ ರಾಜರಥನನ್ನು ಬಂಧಿಸಿದ್ದಾರೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಹಣಕಾಸು ವಿಚಾರವಾಗಿ ಇಬ್ಬರು ಸೈನಿಕರ ಜಗಳ, ಗುಂಡಿನ ದಾಳಿಯಿಂದ ಓರ್ವನಿಗೆ ಗಾಯ