ಧಾರವಾಡ: ಸಣ್ಣಪುಟ್ಟ ರೋಗಗಳಿಗೆ ವೈದ್ಯರ ಬಳಿ ಹೋಗುವುದಕ್ಕೆ ಜನ ಹಿಂದೇಟು ಹಾಕುವುದನ್ನು ಮನಗಂಡ ವೈದ್ಯರ ತಂಡವೊಂದು ಸ್ವತಃ ತಾವೇ ಮನೆ-ಮನೆಗೆ ಹೋಗಿ ಮಧುಮೇಹ, ಸಕ್ಕರೆ ಖಾಯಿಲೆ, ರಕ್ತದೊತ್ತಡ ಸೇರಿದಂತೆ ವಿವಿಧ ರೋಗಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಆದೇಶ ಹೊರಡಿಸಿದ ಹಿನ್ನೆಲೆ ಜನರು ಮನೆ ಬಿಟ್ಟು ಹೊರಗೆ ಬರುವುದಕ್ಕೆ ಹೆದರುವಂತಾಗಿದ್ದು, ಸದ್ಯ ಜಿಲ್ಲೆಯ ಆರು ಜನ ವೈದ್ಯರ ತಂಡ ಸೇರಿಕೊಂಡು ಈ ಕೆಲಸ ಮಾಡುತ್ತಿದೆ.
ಚಿರಾಯು ಹೆಲ್ತ್ ಆ್ಯಂಡ್ ಅವೇರ್ನೆಸ್ ಟೀಮ್ನಿಂದ ಹರೀಶ ಮೆಡಿ ಲ್ಯಾಬ್ನ ವೈದ್ಯರು ಜಿಲ್ಲೆಯ ಯಾವುದೇ ಮೂಲೆಯಿಂದ ಕರೆ ಬಂದಲ್ಲಿ ಅವರ ವಿಳಾಸ ಪಡೆದುಕೊಂಡು ಅವರ ಮನೆಗೆ ಹೋಗಿ ಚಿಕಿತ್ಸೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಕೊರೊನಾ ವಿರುದ್ಧ ಹೋರಾಡುತ್ತಿರುವ ಪೊಲೀಸರು, ಚೆಕ್ ಪೋಸ್ಟ್ ಸಿಬ್ಬಂದಿ, ಪೌರ ಕಾರ್ಮಿಕರಿಗೂ ಸಹ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಮಧುಮೇಹ ಪರೀಕ್ಷೆ ನಡೆಸುತ್ತಿದ್ದಾರೆ.