ಧಾರವಾಡ: ಕರಗದೆ ಇರುವ ಪ್ಲಾಸ್ಟಿಕ್ ತಿಂದು ಅರಗಿಸಿಕೊಳ್ಳಬಹುದಾದಂತಹ ವಿಶೇಷವಾದ ಹುಳುವನ್ನು ಸಂಶೋಧಿಸುವಲ್ಲಿ ವಿದ್ಯಾರ್ಥಿಯೋರ್ವ ಯಶಸ್ವಿಯಾಗಿದ್ದಾರೆ.
ಹೌದು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಶೀತಲ್ ಕೆಸ್ತಿ ಈ ಹುಳುವನ್ನು ಸಂಶೋಧಿಸಿದ್ದಾರೆ. ಇವರ ಈ ಸಾಧನೆಗೆ ಸ್ಪೇನ್, ಚೀನಾ ಬಳಿಕ ನಡೆದ ಅಪರೂಪದ ಸಂಶೋಧನೆ ಎಂಬ ಹೆಗ್ಗಳಿಕೆ ದೊರೆಯುತ್ತಿದೆ.
ಮನೆಯಲ್ಲಿ ಬಹಳ ದಿನ ಇಟ್ಟ ಅಕ್ಕಿಗಳಲ್ಲಿ ಕಾಣುವ ಹುಳುಗಳಂತೆ ಕಾಣುವ ಹುಳುವನ್ನು ಇವರು ಸಂಶೋಧಿಸಿದ್ದಾರೆ. ಇವು ಅದೇ ಸ್ವರೂಪದ ಹುಳುಗಳು, ಹಾಗಾಗಿ ಇವುಗಳನ್ನು ಸಹ ರೈಸ್ ಮೌತ್ ಲಾರ್ವಾ ಹುಳು ಎನ್ನುತ್ತಾರೆ. ಆದ್ರೆ ಪ್ಲಾಸ್ಟಿಕ್ ತಿನ್ನುವ ಈ ಹುಳುಗಳು ಬೆಳೆದು ಚಿಟ್ಟೆಯಾಗಿ ಹಾರಬಲ್ಲವು. ಆರಂಭದಲ್ಲಿ ಇಂತಹ ಹುಳುಗಳನ್ನು ಸ್ಪೇನ್ ದೇಶದಲ್ಲಿ ಸಂಶೋಧನೆ ಮಾಡಲಾಗಿದೆ. ಅದನ್ನು ನೋಡಿ ಅದೇ ಜಾಡಿಯಲ್ಲಿ ಅಧ್ಯಯನ ಮಾಡಿರುವ ಶೀತಲ್ ಅದೇ ರೀತಿಯ ಗುಣಲಕ್ಷಣಗಳಿರುವ ಜೀವಿಯನ್ನು ಪತ್ತೆ ಮಾಡಿ ಪ್ಲಾಸ್ಟಿಕ್ನೊಂದಿಗೆ ಅವುಗಳನ್ನು ಬಿಟ್ಟು ಸಂಶೋಧನೆ ಮಾಡಿದ್ದಾರೆ.
ಸದ್ಯ ಈತನ ಸಂಶೋಧನೆ ಅಂತಾರಾಷ್ಟ್ರೀಯ ಜರ್ನಲ್ ಸೇರಿಕೊಂಡಿರುವುದು ಹೆಮ್ಮೆಯ ವಿಷಯ. ತಮ್ಮದೇ ವಿಭಾಗದ ಓರ್ವ ಪ್ರಾಧ್ಯಾಪಕ ಡಾ. ಟಿ.ಸಿ. ಶಿವಶರಣ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದಾರೆ. ಇಂತಹ ಕೀಟಗಳ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಶೀತಲ್ನನ್ನು ಗಮನಿಸಿದ ಶಿವಶರಣ ಅವರು ಮಾರ್ಗದರ್ಶನ ಮಾಡಿದ್ದಾರೆ.
ಆರಂಭದಲ್ಲಿ ಜೇನುಗೂಡಿನ ಒಣಗಿದ ಭಾಗವನ್ನು ತಂದು ಪ್ಲಾಸ್ಟಿಕ್ ಚೀಲದಲ್ಲಿಟ್ಟಾಗ ಆ ಪ್ಲಾಸ್ಟಿಕ್ ಕೊರೆದು ಹುಳುಗಳು ಹೋರಹೋಗಿದ್ದವಂತೆ. ಅದನ್ನೇ ಆಧರಿಸಿ ಕೃತಕವಾಗಿ ಅಂತಹ ಹುಳುಗಳನ್ನು ಸೃಷ್ಟಿಸಿ ಬಳಿಕ ಅವುಗಳನ್ನು ಪ್ಲಾಸ್ಟಿಕ್ ಮೇಲೆ ಪ್ರಯೋಗ ಮಾಡಿ ಶೀತಲ್ ಸೈ ಎನಿಸಿಕೊಂಡಿದ್ದಾರೆ.