ಹುಬ್ಬಳ್ಳಿ: ಕೂಲಿ ಮಾಡಿದರೆ ಊಟ, ಇಲ್ಲದಿದ್ದರೆ ಉಪವಾಸ ಎನ್ನುವ ಈ ಕುಟುಂಬ ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿ ವಿಲ ವಿಲ ಒದ್ದಾಡುತ್ತಿದೆ. ಮನೆಯ ಮಗನ ಪ್ರೇಮ ಪ್ರಕರಣದಿಂದ ಇಡೀ ಕುಟುಂಬ ಪೊಲೀಸ್ ದೌರ್ಜನ್ಯ ಎದುರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಮೊಮ್ಮಗನ ಸಲುವಾಗಿ ಕಣ್ಣೀರು ಹಾಕುತ್ತಿರುವ ಅಜ್ಜ. ಪೊಲೀಸರ ಕೈಯಲ್ಲಿ ಹೊಡೆಸಿಕೊಂಡು ಗಾಯಗೊಂಡಿರುವ ವೃದ್ಧ ಜೀವ. ಸಹೋದರನ ನೆನಪಿನಲ್ಲಿ ಕಣ್ಣೀರು ಹಾಕುತ್ತಿರುವ ಸಹೋದರಿ. ಇದೆಲ್ಲದಕ್ಕೂ ಕಾರಣವಾಗಿದ್ದು ಮಾತ್ರ ಪ್ರೀತಿ. ರಾಯನಾಳದ ಯುವಕ ಆನಂದ ತಿಪ್ಪಣ್ಣವರ ಕುಂದಗೋಳ ಪಟ್ಟಣದ ಯುವತಿಯನ್ನು ಸುಮಾರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ, ಅವರಿಬ್ಬರೂ ಹೇಳದೇ ಕೇಳದೇ ಮನೆ ಬಿಟ್ಟು ಹೋಗಿದ್ದಾರಂತೆ. ಇದರಿಂದ ಹುಡುಗಿಯ ಮನೆಯವರು ಮಾತ್ರವಲ್ಲದೆ, ಕುಂದಗೋಳ ಪೊಲೀಸ್ ಠಾಣೆ ಪೊಲೀಸರು ದಿನವೂ ತಮ್ಮ ಮನೆಗೆ ಬಂದು ಕಿರುಕುಳ ನೀಡುತ್ತಿದ್ದಾರೆ ಎಂದು ಈ ಕುಟುಂಬ ಆರೋಪಿಸಿದೆ. ಕುಟುಂಬದ ವಯೋವೃದ್ಧನ ಮೇಲೆಯೂ ಮನಬಂದಂತೆ ಪೊಲೀಸರು ಹಲ್ಲೆ ನಡೆಸಿದ್ದಾರಂತೆ.
ಇದನ್ನೂ ಓದಿ: 'ಕಾಶ್ಮೀರಿ ಫೈಲ್ಸ್' ಚಿತ್ರವನ್ನು ಬಿಜೆಪಿಗೆ ಅನುಕೂಲಕರ ರೀತಿಯಲ್ಲಿ ತೆಗೆಯಲಾಗಿದೆ: ಖರ್ಗೆ
ಪ್ರೀತಿ ಮಾಡಿ ಆ ಜೋಡಿ ಮನೆಯಿಂದ ಹೊರಹೋಗಿ ಎಲ್ಲೋ ಜೀವನ ನಡೆಸುತ್ತಿದೆ. ಆದರೆ, ಇಲ್ಲಿರುವ ಮನೆಯವರಿಗೆ ಪ್ರತಿದಿನವೂ ಪೊಲೀಸರು ಹಾಗೂ ಹುಡುಗಿಯ ಕುಟುಂಬದವರು ಕಿರುಕುಳ ನೀಡುತ್ತಿದ್ದಾರಂತೆ. ಏಕಾಏಕಿ ರಾತ್ರಿ ವೇಳೆ ಬಂದು ಮನೆಯಲ್ಲಿ ಸಿಕ್ಕವರನ್ನು ಏಳೆದುಕೊಂಡು ಹೋಗಿ ಮನಬಂದಂತೆ ಹಲ್ಲೆ ನಡೆಸುತ್ತಿದ್ದಾರೆ. ನಮ್ಮ ಅಣ್ಣ ಮಾಡಿದ ತಪ್ಪಿಗೆ ನಮಗೇಕೆ ಶಿಕ್ಷೆ ಎಂದು ಆನಂದನ ಸಹೋದರಿ ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದಾಳೆ.