ಹುಬ್ಬಳ್ಳಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಕೋರ್ಟ್ ಷರತ್ತು ಉಲ್ಲಂಘನೆ ಮಾಡಿದ್ದಕ್ಕೆ ಜಾಮೀನು ನೀಡಿದ್ದ ಇಬ್ಬರಿಗೆ ಜಿಲ್ಲಾ ದಂಡಾಧಿಕಾರಿ ನ್ಯಾಯಾಲಯ 1 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ಅಲ್ಲದೇ ದಂಡ ತುಂಬಲು ವಿಫಲರಾದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿದೆ.
ಘಟನೆ ಹಿನ್ನೆಲೆ: 2018ರ ಜನವರಿ 2ರಂದು ಗೋಪನಕೊಪ್ಪದ ಜೆ.ಕೆ. ಸ್ಕೂಲ್ ಬಳಿ ಒರಿಸ್ಸಾದ ಹರಿಶಂಕರ ಪಾಡಿ ಮತ್ತು ಕೇಶ್ವಾಪುರದ ಸಾಗರ ಜಗಾಪೂರ 2 ಕೆಜಿ ಗಾಂಜಾ ಸಮೇತ ಸಿಕ್ಕಿಬಿದ್ದಿದ್ದರು. ಹರಿಶಂಕರನಿಗೆ ಧಾರವಾಡದ ಗುಲಗಂಜಿ ಕೊಪ್ಪದ ಸಣ್ಣನಿಂಗನಗೌಡ ಪಾಟೀಲ ಮತ್ತು ಪಂಚಾಕ್ಷರಿ ಓಣಿಯ ಅಕ್ಬರ್ ಅಲಿ ಬೆಟಗೇರಿ ಜಾಮೀನು ನೀಡಿದ್ದರು.
ಆರೋಪಿ ಕೋರ್ಟ್ ಕಲಾಪಗಳಿಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದ. ಆರೋಪಿ ಕೋರ್ಟ್ ಕಲಾಪಕ್ಕೆ ಬರುವಂತೆ ತಿಳಿಸಬೇಕೆಂದು ಜಾಮೀನು ನೀಡಿದವರಿಗೆ ಸೂಚಿಸಿದ್ದರೂ ಬಂದಿರಲಿಲ್ಲ. ಇದರಿಂದ ಜಿಲ್ಲಾಧಿಕಾರಿ ಎನ್‍ಡಿಪಿಎಸ್ ಕಾಯ್ದೆಯಡಿ ಜಾಮೀನುದಾರರಿಗೆ ದಂಡ ವಿಧಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.